ಕರಾವಳಿ

ಬೀದಿಬದಿ ವ್ಯಾಪಾರಿಗಳಿಗೆ ಸಮೃದ್ಧಿ ಯೋಜನೆಯಡಿ 10 ಸಾವಿರ ಪ್ರೋತ್ಸಾಹಧನ

Pinterest LinkedIn Tumblr

ಉಡುಪಿ: ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರಸಕ್ತ ಸಾಲಿನ ಉಪ ಯೋಜನೆಯಡಿ 18 ರಿಂದ 60 ವರ್ಷದ ಒಳಗಿನ ವಯೋಮಿತಿಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಹಾಗೂ ನಗರ ಸಭೆ/ ಪುರಸಭೆ/ ಪಟ್ಟಣ ಪಂಚಾಯತ್ಗಳಲ್ಲಿ ಬೀದಿಬದಿ ವ್ಯಾಪಾರಿಗಳೆಂದು ನೊಂದಣಿಯಾಗಿರುವ ಪರವಾನಗಿ ಹೊಂದಿರುವ ಮಹಿಳೆಯರಿಗೆ ಈ ಯೋಜನೆಯಡಿ 10,000 ರೂ ಪ್ರೋತ್ಸಾಹಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉಡುಪಿ, ಬೈಂದೂರು, ಕುಂದಾಪುರ, ಕಾಪು ವಿಧಾನ ಸಭಾ ಕ್ಷೇತ್ರಗಳಿಂದ ಪರಿಶಿಷ್ಟ ಜಾತಿಯಿಂದ 7 ಮತ್ತು ಪರಿಶಿಷ್ಟ ಪಂಗಡದಿಂದ 121 ಫಲಾನುಭವಿಗಳು ಈ ಯೋಜನೆಯಲ್ಲಿ ಪ್ರೋತ್ಸಾಹಧನ ಪಡೆಯಲು ಅರ್ಹರಿದ್ದು, ಈ ಯೋಜನೆಯಲ್ಲಿ ಆಯ್ಕೆಯಾಗಿ ಉಳಿದ ಅರ್ಜಿಯನ್ನು ಹೆಚ್ಚುವರಿ ಅರ್ಜಿಗಳನ್ನಾಗಿ ಕಳುಹಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಶಕ್ತಿ ಯೋಜನೆಯನ್ನು ಕುರಿತು ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಉದ್ಯೋಗವನ್ನು ಕಲ್ಪಿಸುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಉದ್ಯೋಗ ವಂಚಿತ ಮಹಿಳೆಯರಿಗೆ ಪರ್ಯಾಯ ಉದ್ಯೋಗ ಸೃಷ್ಟಿಬೇಕು ಎಂದರು.

ಜಿಲ್ಲೆಯಲ್ಲಿ ಸಮಸ್ಯೆಯ ಸುಳಿಗೆ ಸಿಕ್ಕ ಹಲವಾರು ನೊಂದ ಮಹಿಳೆಯರನ್ನು ರಕ್ಷಿಸಿ ಅವರನ್ನು ಮತ್ತೆ ವಾಪಸ್ ಅವರ ಕುಟುಂಬಕ್ಕೆ ಸೇರಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ ಮತ್ತು ಮಹಿಳಾ ಅಭಿವೃದ್ಧಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಂಡು ಅವರ ರಕ್ಷಣೆಗಾಗಿ ಇರುವ ಮಹಿಳಾ ಶಕ್ತಿ ಯೋಜನೆಯ ಬಗ್ಗೆ ಕಲ್ಪನೆಯನ್ನು ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ ಹೇಳಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಯೋಜನಾ ನಿರ್ದೇಶಕ ಬಾಬು ಎಮ್, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ಎಸ್ ನಾಯಕ್, ಮಹಿಳಾ ಶಕ್ತಿ ಕೇಂದ್ರದ ಮಹಿಳಾ ಕಲ್ಯಾಣಾಧಿಕಾರಿ ದೀಪಾ, ಮತ್ತಿತರರು ಉಪಸ್ಥಿತರಿದ್ದರು.

Comments are closed.