ಕರಾವಳಿ

ಕುಂದಾಪುರದಲ್ಲಿ ಮೀನುಗಾರಿಕಾ ದೋಣಿ ಅವಘಡ-ನಾಲ್ವರು ಪಾರು

Pinterest LinkedIn Tumblr

ಕುಂದಾಪುರ: ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದ ಘಟನೆ ಗಂಗೊಳ್ಳಿ ಸಮೀಪ ಗುರುವಾರ ಬೆಳಿಗ್ಗೆ ನಡೆದಿದ್ದು, ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಂಗೊಳ್ಳಿ ನಿವಾಸಿಗಳಾದ ಗುರುರಾಜ ಖಾರ್ವಿ(30), ಮಿಥುನ್ ಖಾರ್ವಿ(26), ಚಂದ್ರ ಖಾರ್ವಿ(45) ಮತ್ತು ರೋಶನ್(35) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಗುರುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಸಮುದ್ರದಲ್ಲಿ ಗಂಗೊಳ್ಳಿಯಿಂದ ಸುಮಾರು 7 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದೆ.

ದೋಣಿಯಲ್ಲಿದ್ದ ಇಬ್ಬರು ಮೀನುಗಾರರು ಸಮುದ್ರದ ನೀರಿಗೆ ಹಾರಿ ಈಜಿ ಇನ್ನೊಂದು ದೋಣಿ ಮೂಲಕ ಸುರಕ್ಷಿತವಾಗಿ ದಡ ಸೇರಿದ್ದರೆ, ಇನ್ನಿಬ್ಬರು ಮೀನುಗಾರರನ್ನು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ದೋಣಿ, ಇಂಜಿನ್ ಮತ್ತು ಬಲೆ ಸಮುದ್ರ ಪಾಲಾಗಿದ್ದು, ಸುಮಾರು ೫ ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Comments are closed.