ಕರಾವಳಿ

ಶೋಷಿತ ವರ್ಗ ತಲೆ ಎತ್ತಿ ನಿಲ್ಲಲು ಅಂಬೇಡ್ಕರ್ ರೂಪಿಸಿದ ಸಂವಿಧಾನ ಕಾರಣ: ಮಾಣಿಗೋಪಾಲ್

Pinterest LinkedIn Tumblr

ಕುಂದಾಪುರ: ಅಸ್ಪ್ರಶ್ಯತೆ ಸಹಿತ ನಾನಾ ಕಾರಣಕ್ಕೆ ಶೋಷಿತ ವರ್ಗಕ್ಕೆ ಧ್ವನಿಯಾದ ಅಂಬೇಡ್ಕರ್ ಅವರು ಒಬ್ಬ ಯುಗಪುರುಷ. ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತ ವರ್ಗ ತಲೆ ಎತ್ತಿ ನಿಲ್ಲಲು ಅಂಬೇಡ್ಕರ್ ರೂಪಿಸಿರುವ ಸಂವಿಧಾನವೇ ಕಾರಣವಾಗಿದೆ ಎಂದು ಹಿರಿಯ ಮುಖಂಡ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾಣಿಗೋಪಾಲ್ ಹೇಳಿದರು.

ಅವರು ಕುಂದಾಪುರ ರೋಟರಿ ಕಲಾ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮಘರ್ಜನೆ) ರಾಜ್ಯ ಸಮಿತಿ ಬೆಂಗಳೂರು ಇವರು ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಅರ್ಪಣೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಅಂಬೇಡ್ಕರ್ 2021 ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವಿಜಯಪುರ ಜಿಲ್ಲಾ ದಲಿತ ಕಲಾ ಮಂಡಳಿಯವರು ಕ್ರಾಂತಿಗೀತೆ ಹಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ ತಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಭೀಮಘರ್ಜನೆ ಪ್ರಚಾರಕ ಸುಭಾಷ್ ನಾಟೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ರಾಷ್ಟ್ರೀಯ ಮುಸ್ಲಿಂ ಮೋರ್ಚಾ ರಾಜ್ಯಾಧ್ಯಕ್ಷ ಮಹಮ್ಮದ್ ತೌಪೀಕ್ ಪಾರ್ಕರ್, ಭೀಮಘರ್ಜನೆ ಕೋಲಾರ ರಾಜ್ಯ ಖಜಾಂಚಿ ಕೃಷ್ಣಪ್ಪ, ಯುವಘರ್ಜನೆ ಕೋಲಾರ ರಾಜ್ಯ ಖಜಾಂಚಿ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು. ಚಂದ್ರ ಅಲ್ತಾರ್ ಸ್ವಾಗತಿಸಿದರು. ಭೀಮಘರ್ಜನೆ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮಲತಾ ಬಜಗೋಳಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಶಾಸ್ತ್ರೀ ವೃತ್ತದಿಂದ ನೀಲಿ ಸೈನ್ಯದ ಪಥ ಸಂಚಲನ ನಡೆಯಿತು.

‘ಭೀಮ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ :
ಬೆಂಗಳೂರು ನಗರ ಸಾಮಾಜಿಕ ದಲಿತ ಹೋರಾಟಗಾರ ಜಿ.ಎ.ನಾಗಪ್ಪ, ಪಡುಕೋಣೆ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಪ್ಪ ಶೆಟ್ಟಿ, ಪತ್ರಕರ್ತ ಯೋಗೀಶ್ ಕುಂಭಾಸಿ, ಸಾಮಾಜಿಕ ಹೋರಾಟಗಾರರಾದ ಪ್ರಭಾಕರ ಮೂಡುಬಿದಿರೆ, ನಜೀರ್ ಬೆಳ್ವಾಯಿ ಅವರಿಗೆ ರಾಜ್ಯಮಟ್ಟದ ಭೀಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ :
ಗ್ರಾಮ ಪಂಚಾಯಿತಿ ನೂತನ ಸದಸ್ಯರಾದ ಜೀವನ್ ಕುಮಾರ್, ಮಂಜುನಾಥ ಗುಡ್ಡೆಯಂಗಡಿಯವರನ್ನು ಸನ್ಮಾನಿಸಲಾಯಿತು.

Comments are closed.