ಕರಾವಳಿ

ಉಡುಪಿಯಲ್ಲಿ 5 ಕೋಟಿ ವೆಚ್ಚದ ಕರಕುಶಲ ವಸ್ತುಗಳ ಶೋರೂಂ: ಡಾ.ಬೇಳೂರು ರಾಘವೇಂದ್ರ ಶೆಟ್ಟಿ

Pinterest LinkedIn Tumblr

ಉಡುಪಿ: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಐದು ಕೋಟಿ ರೂ. ವೆಚ್ಚದಲ್ಲಿ ಉಡುಪಿಯಲ್ಲಿ ಕರಕುಶಲ ವಸ್ತುಗಳ ಶೂರೂಮ ಹಾಗೂ ಕುಂದಾಪುರದಲ್ಲಿ ಉತ್ಪಾದನಾ ಘಟಕ ನಿರ್ಮಾಣ ಕಾರ್ಯವು ಮೂರು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಆರು ದಿನಗಳ ಕರಕುಶಲ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಭಾಗದ ಕರಕುಶಲ ಕರ್ಮಿಗಳಿಗೆ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ, ಅವರಿಗೆ ಅಗತ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡಲಾಗುವುದು. ಸ್ವಾವಲಂಬಿ ಬದುಕು ನಡೆಸುತ್ತಿರುವ ಕರಕುಶಲ ಕರ್ಮಿಗಳು, ಉತ್ಪಾದಿಸುವ ವಸ್ತುಗಳನ್ನ್ನು ಖರೀದಿಸುವ ಮೂಲಕ ಅವರಿಗೆ ಹೆಚ್ಚಿನ ಬೆಂಬಲ ನೀಡಬೇಕು. ವಿದೇಶಿ ವಸ್ತುಗಳಿಗೆ ಪ್ರೋತ್ಸಾಹ ನೀಡುವ ಬದಲು, ದೇಶೀಯ ವಸ್ತುಗಳನ್ನ ಖರೀದಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಕರಕುಶಲ ವಸ್ತುಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ, ಸಬ್ಸಿಡಿ ದರದಲ್ಲಿ ಗಂಧದ ಪರಿಕರ ನೀಡಲಾಗುವುದು. ಇಡೀ ರಾಜ್ಯದಲ್ಲಿ ಹೊಸದಾಗಿ 12 ಶೋ ರೂಮ್ ಗಳನ್ನು ಸ್ಥಾಪಿಸುವ ಉದ್ಧೇಶವಿದ್ದು, ಕರ್ನಾಟಕ ಪರಂಪರೆ ಸೂಚಿಸುವ, ಹಂಪಿ, ಮೈಸೂರು ಅರಮನೆ ಬೇಲೂರು ಹಳೇಬೀಡು ಮಾದರಿಯ ವಸ್ತು ಗಳನ್ನು ತಯಾರಿಸುವಂತೆ ಕರಕುಶಲ ಕರ್ಮಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಮೇಳದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಈ ವೇಳೆ ಗುಡಿಕೈಗಾರಿಕೆಯ ಮಡಿಕೆ ಹಾಗೂ ಬಿದಿರಿನ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಯಿತು.

Comments are closed.