ಕರಾವಳಿ

ಸಚಿವ ಕೋಟ ಬಗ್ಗೆ ಅವ್ಯಾಚ್ಯವಾಗಿ ನಿಂದಿಸಿದವನ ಬಂಧನವಾಗಬೇಕು: ಸದಾನಂದ ಉಪ್ಪಿನಕುದ್ರು

Pinterest LinkedIn Tumblr

ಕುಂದಾಪುರ: ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಅನಿಲ್ ಕುಮಾರ್ ಶೆಟ್ಟಿ ಎಂಬುವರು ಅವಾಚ್ಯವಾಗಿ ನಿಂದಿಸಿ, ಸಚಿವರ ತೇಜೋವಧೆ ಮಾಡಿರುವುದು ಖಂಡನಾರ್ಹ. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆಗ್ರಹಿಸಿದ್ದಾರೆ.

ಕುಂದಾಪುರದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲ್ ಕುಮಾರ್ ಶೆಟ್ಟಿ ಪೆರ್ಡೂರು ಯಕ್ಷಗಾನ ಕಲಾವಿದರಾಗಿದ್ದು, ಕರಾವಳಿಯ ಕಲೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸಬೇಕಾಗಿದ್ದವರು. ಇಂತಹಾ ವ್ಯಕ್ತಿ ಸರ್ಕಾರದ ಸಚಿವರೂ, ಸರಳ ಸಜ್ಜನಿಕೆಯ, ಸಾಮಾಜಿಕ ಕಳಕಳಿಯ ನೇತಾರರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಯಾವುದೇ ಪುರಾವೆಗಳಿಲ್ಲದೇ ಅವಹೇಳನಕಾರಿಯಾಗಿ ಸಾರ್ವಜನಿಕ ಹೇಳಿಕೆ ನೀಡಿರುವುದಕ್ಕೆ ಭಾರತೀಯ ಜನತಾ ಪಾರ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದರು.

ತಪ್ಪಿತಸ್ಥ ಅನಿಲ್ ಕುಮಾರ್ ಶೆಟ್ಟಿ ಅವರು ಸಾರ್ವಜನಿಕವಾಗಿ ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಬೇಕು. ಅಲ್ಲದೇ ಯಾವುದೇ ಆಧಾರವಿಲ್ಲದೇ ಈ ರೀತಿ ಸಾರ್ವಜನಿಕ ನಿಂದನೆ ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಅನಿಲ್ ಕುಮಾರ್ ಶೆಟ್ಟಿ ಪೆರ್ಡೂರು ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ. ಒಂದು ವೇಳೆ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಸುದ್ಧಿಗೋಷ್ಠಿಯಲ್ಲಿ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ ಬಾಣ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಮಹೇಶ್ ಹಟ್ಟಿಕುದ್ರು, ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಸಂತೋಷ್ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನವೀನ್ ಕಾಂಚನ್, ನಗರ ಪ್ರಮುಖ್ ರತ್ನಾಕರ ಕುಂದಾಪುರ ಉಪಸ್ಥಿತರಿದ್ದರು.

Comments are closed.