ಕರಾವಳಿ

ಹುಟ್ಟುಹಬ್ಬಕ್ಕಾಗಿ ಕೊಲ್ಲೂರಿಗೆ ಬಾರದ ಜೇಸುದಾಸ್: ಈ ಬಾರಿ ಭಕ್ತಿಸುಧೆಯಿಲ್ಲ!

Pinterest LinkedIn Tumblr

ಕುಂದಾಪುರ: ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷದ ಜ.10 ರಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕ ಡಾ.ಕೆ.ಜೆ.ಜೇಸುದಾಸ್ ಕೊರೊನಾ ಕಾರಣದಿಂದಾಗಿ ಈ ಬಾರಿ ಕೊಲ್ಲೂರಿನಲ್ಲಿ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಮಾಡಿಕೊಳ್ಳಲಿಲ್ಲ.

(ಸಂಗ್ರಹ ಚಿತ್ರ)

ಪ್ರಸ್ತುತ ಅಮೇರಿಕಾದಲ್ಲಿ ಇರುವ ಜೇಸುದಾಸ್ ಅವರು ಕೊರೊನಾ ಮಹಾಮಾರಿಯ ಮುನ್ನೆಚ್ಚರಿಕೆಯಿಂದಾಗಿ ಭಾರತಕ್ಕೆ ಪ್ರಯಾಣ ಬೆಳೆಸಿರಲಿಲ್ಲ. ಪ್ರತಿ ಬಾರಿಯೂ ಜ.9 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕೊಲ್ಲೂರಿಗೆ ಬಂದು ವಾಸ್ತವ್ಯ ಮಾಡುವ ಅವರು, ಜ.10 ರಂದು ಬೆಳಿಗ್ಗೆ ಶ್ರೀ ದೇವಿಯ ದರ್ಶನ ಪಡೆದು, ಚಂಡಿಕಾ ಹೋಮ ಹಾಗೂ ಇತರ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಪೂಜೆ ಸಲ್ಲಿಸಿದ ಬಳಿಕ ಸರಸ್ವತಿ ಮಂಟಪದಲ್ಲಿ ಅಥವಾ ದೇಗುಲದ ಪ್ರಾಂಗಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀ ಮೂಕಾಂಬಿಕೆಗೆ ಭಕ್ತಿ ಸುಧೆಯನ್ನು ಅರ್ಪಿಸುವುದು ವಾಡಿಕೆಯಾಗಿತ್ತು. ಡಾ.ಕೆ.ಜೆ.ಜೇಸುದಾಸ್ ಅವರ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ದೇಗುಲದಲ್ಲಿ ಅವರು ಅರ್ಪಿಸುವ ಭಕ್ತಿ ಸುಧೆಯನ್ನು ಕೇಳಲು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅಭಿಮಾನಿಗಳು ಬಂದು ಸೇರುತ್ತಿದ್ದರು.

ಈ ಬಾರಿ ಕೊರೊನಾ ಕಾರಣದಿಂದಾಗಿ ದೇಗುಲದಲ್ಲಿ ಅವರ ಹುಟ್ಟು ಹಬ್ಬದಾಚರಣೆ ಹಾಗೂ ಸಂಗೀತ ಸುಧೆ ಕಾರ್ಯಕ್ರಮ ನಡೆದಿಲ್ಲ. ಆದ್ದರಿಂದ ಅಭಿಮಾನಿಗಳಲ್ಲಿ ನಿರಾಶೆ ಮೂಡಿತ್ತು. ಈ ಕುರಿತು ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ.ಮಹೇಶ್‌ ಅವರು ಡಾ.ಕೆ.ಜೆ.ಜೇಸುದಾಸ್ ಅವರ ಹುಟ್ಟು ಹಬ್ಬದ ಅಂಗವಾಗಿ ಭಾನುವಾರ ದೇವಸ್ಥಾನದಲ್ಲಿ ಯಾವುದೆ ಸಂಗೀತ ಕಾರ್ಯಕ್ರಮಗಳು ಹಾಗೂ ಪೂಜೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.