ಕರಾವಳಿ

ಕೊಲೆಯತ್ನ ಪ್ರಕರಣದ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ |ಕುಂದಾಪುರ ಸೆಶನ್ಸ್ ನ್ಯಾಯಾಲಯ ಆದೇಶ

Pinterest LinkedIn Tumblr

ಕುಂದಾಪುರ: ತೆಕ್ಕಟ್ಟೆ ಸಮೀಪದ ಉಳ್ತೂರು ಎಂಬಲ್ಲಿ ಜಾಗದ ಪೈಪ್ ಲೈನ್ ಸಂಬಂಧಿತ ವಿಚಾರದಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯು ತನ್ನ ವಕೀಲರ ಮೂಲಕ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

2020 ನ.20 ರಂದು ನಡೆದ ಘಟನೆ ಇದಾಗಿತ್ತು. ಪೈಪ್ ಲೈನ್ ವಿಚಾರದಲ್ಲಿ ಭಾಸ್ಕರ್ ಶೆಟ್ಟಿ ಎಂಬಾತ ತನ್ನ ಮಗನ ಜೊತೆಗೂಡಿ ವಸಂತ್ ಶೆಟ್ಟಿಯವರನ್ನು ಕೊಲ್ಲಲು ಮಾರಾಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ವಸಂತ್ ಶೆಟ್ಟಿಯವರ ಸಹೋದರರಿಗೆ ಹಾಗೂ ಪತ್ನಿಗೂ ಹಲ್ಲೆ ನಡೆಸಿದ್ದರು‌. ಘಟನೆಯಲ್ಲಿ ವಸಂತ್ ಶೆಟ್ಟಿ, ಅವರ ಪತ್ನಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಘಟನೆ‌ ಬಳಿಕ ಆರೋಪಿ ಭಾಸ್ಕರ್ ಶೆಟ್ಟಿ ಪರಾರಿಯಾಗಿ ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಅವರು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಪ್ರಕಟಿಸಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಅವರು ಗಾಯಾಳುವಿಗಾದ ತೀವೃ ಸ್ವರೂಪದ ಹಲ್ಲೆಯ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಲ್ಲದೆ ಈ ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ನೇರ ಭಾಗಿದಾರ ಎನ್ನುವ ಬಗ್ಗೆ ವಾದಿಸಿದ್ದರು.

 

Comments are closed.