ಕರಾವಳಿ

ಉಡುಪಿ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಪಂ ಚುನಾವಣೆ-3 ತಾಲೂಕುಗಳಲ್ಲಿ ಶೇ.75.42 ಮತದಾನ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ, ಕಾಪು, ಕಾರ್ಕಳ ತಾಲೂಕುಗಳ 86 ಗ್ರಾಪಂಗಳ ಒಟ್ಟು 1209 ಸ್ಥಾನಗಳಿಗೆ ಇಂದು ಶಾಂತಿಯುತ ಮತದಾನ ನಡೆದಿದ್ದು, ಸರಾಸರಿ ಶೇ.75.42 ಮತದಾನ ಆಗಿದೆ. ಪ್ರಾಥಮಿಕ ವರದಿಯಂತೆ ಕುಂದಾಪುರ ತಾಲೂಕಿನಲ್ಲಿ ಶೇ.76.09, ಕಾಪು ತಾಲೂಕಿನಲ್ಲಿ ಶೇ.73.08, ಕಾರ್ಕಳ ತಾಲೂಕಿನಲ್ಲಿ ಶೇ.76.21 ಮತದಾನ ನಡೆದಿದ್ದು ಯಾವುದೇ ಅಹಿತಕರ ಘಟನೆ ನಡೆ ದಿರುವ ಬಗ್ಗೆ ವರದಿಯಾಗಿಲ್ಲ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಕಾರ್ಕಳ ಹಾಗೂ ಕಾಪು ತಾಲೂಕಿನ ಮತಗಟ್ಟೆಗೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ಕಳ, ಕುಂದಾಪುರ ಹಾಗೂ ಕಾಪು ತಾಲೂಕಿನ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕೆಲವು ಮತಗಟ್ಟೆಗಳಲ್ಲಿ ಪಕ್ಷದ ಕಾರ್ಯಕರ್ತರು ಮತದಾರರನ್ನು ಟೆಂಪೊ ಟ್ರಾವೆಲರ್ಸ್, ಕಾರು ಹಾಗೂ ರಿಕ್ಷಾಗಳಲ್ಲಿ ಮತಗಟ್ಟೆಗೆ ಕರೆತರುವ ದೃಶ್ಯ ಕಂಡುಬಂದವು. ಇದೇ ವಿಚಾರವಾಗಿ ಕುಂದಾಪುರ ಅಂಪಾರುವಿನಲ್ಲಿ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದ ಬಗ್ಗೆ ವರದಿಯಾಗಿದೆ.

ಮತದಾರರು ಮತದಾನದ ವೇಳೆ ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಕಾಪಾಡುವಲ್ಲಿ ಹಿಂದೇಟು ಹಾಕುತ್ತಿದ್ದರು. ಮೂರು ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಕಾರ್ಕಳ ತಾಲೂಕಿನ ಶಿರ್ಲಾಲು ಮತಗಟ್ಟೆಯಲ್ಲಿ ಕೇಸರಿ ಶಾಲು ಧರಿಸಿ ಮತಗಟ್ಟೆ ಒಳಗೆ ಕುಳಿತಿದ್ದ ಏಜೆಂಟ್ ಬಗ್ಗೆ ನೋಡೆಲ್ ಅಧಿಕಾರಿ ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಬಗ್ಗೆ ಕೆಲ ಕಾಲ ಗೊಂದಲ ನಿರ್ಮಾಣವಾಗಿತ್ತು. ಈ ಸಂಬಂಧ ಸರಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲದ ಕಾರಣ ಏಜೆಂಟ್ಗೆ ಶಾಲು ಧರಿಸಲು ಅವಕಾಶ ನೀಡಲಾಯಿತು.

Comments are closed.