ಕರಾವಳಿ

ಯೇಸು ಅಂದು ಹುಟ್ಟಿದ್ದು ಮಾತ್ರವಲ್ಲ ದಿನಾಲು ಹುಟ್ಟುತ್ತಾನೆ: ಫಾ. ದೀಪ್

Pinterest LinkedIn Tumblr

ಕುಂದಾಪುರ: ’ಯೇಸು ಅರಮನೆಯಲ್ಲಿ, ಶ್ರೀಮಂತನಾಗಿ ಹುಟ್ಟಬಹುದಿತ್ತು. ಆದರೆ ಯೇಸು ಬಡವರಲ್ಲಿ ಬಡವ, ಸಣ್ಣವರಲ್ಲಿ ಸಣ್ಣವನಾಗಿ ಹುಟ್ಟಿದ, ಕಾರಣ ಇಂತವರಿಗೆ ದೇವರ ಪ್ರೀತಿ ಬೇಕಿತ್ತು. ಇದರ ಅರ್ಥ ನಾವು ಕಷ್ಟ ಸಂಕಷ್ಟದಲ್ಲಿರುವರಿಗೆ, ಅನಾಥರಿಗೆ, ಬಡ ಬಲ್ಲಿಗರಿಗೆ ಆಸರೆ ಪ್ರೀತಿ ದಯೆ ನೀಡಬೇಕೆಂದು ದೇವರು ಬಯಸುತ್ತಾನೆ. ಯೇಸು ಅಂದು ಮಾತ್ರ ಹುಟ್ಟಿದ್ದಲ್ಲಾ, ಬಡವರ ರೂಪದಲ್ಲಿ ಆತನು ದಿನಾಲು ಹುಟ್ಟುತ್ತಾನೆ. ಅಂದ ಮೇಲೆ ನಾವು ಪ್ರೀತಿ ವಾತ್ಸಲ್ಯ ತೋರಲೆಬೇಕು’ ಎಂದು ಕಟ್ಕರೆ ಬಾಲಯೇಸುವಿನ ಆಶ್ರಮದ ಧರ್ಮಗುರು ವಂ|ದೀಪ್ ಫೆರ್ನಾಂಡಿಸ್ ಹೇಳಿದರು.

ಅವರು 451 ವರ್ಷದ ಸಂಭ್ರಮದಲ್ಲಿರುವ, ಉಡುಪಿ ಧರ್ಮಪ್ರಾಂತ್ಯದ ಅತ್ಯಂತಹಿರಿಯ ಐತಿಹಾಸಿಕ ಹಲವು ದಾಖಲೆಗಳಿರುವ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಮಹಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.’ ಇಂದು ಇಡೀ ವಿಶ್ವವೇ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದೆ, ಇಡೀ ವಿಶ್ವದಲ್ಲಿ ಕ್ರಿಸ್ಮಸ್ ಪ್ರಯುಕ್ತ ಜೋರಾಗಿ ವ್ಯಾಪರ ಮಾಡಿ ಲಾಭ ಗಳಿಸುತಿದ್ದಾರೆ, ಆದರೆ ನಾವು ಕ್ರಿಸ್ಮಸ್ ಸಂದರ್ಭದಲ್ಲಿ ಅಧ್ಯಾತ್ಮಿಕ ಲಾಭ ಪಡೆಯೋಣ. ನಮಗೆ ಕ್ರಿಸ್ಮಸ್ ನ ವಸ್ತ್ರ ವಿನ್ಯಾಸ ಮೋಜು ಮಸ್ತಿ ಇಂತಹ ಆಢಂಬರ ಹೊರಗಿನ ಸಂಭ್ರಮ ಮುಖ್ಯವಲ್ಲಾ, ಒಳಗಿನ ಅಂತರಾತ್ಮದ ಸಂಭ್ರಮ ಮುಖ್ಯ. ಯೇಸುವಿನ ಜನನ ನಮಗೆ ಭರವಸೆ ಮೂಡಿಸಿದೆ. ಯೇಸುವಿನ ಜನನದ ಮೂಲಕ ದೇವನು ತಾನು ಯಾರೆಂದು ನಮಗೆ ತಿಳಿಸುತ್ತಾನೆ. ದೇವರು ಯೇಸುವಿನ ರೂಪದಲ್ಲಿ ಮನುಷ್ಯ ಕುಲಕ್ಕೆ ಪ್ರೀತಿ ನೀಡಲು ಬಂದವನೆಂದು’ ಅವರು ತಿಳಿಸಿದರು.

ಈ ಸಲದ ಕ್ರಿಸ್ಮಸ್ ಪೂಜೆಗೆ ಭಕ್ತಿಗೆ ಪ್ರಾಧಿನಿತ್ಯ ಕೊಡಲಾಗಿದ್ದು, ಬಾಲ ಯೇಸುವಿಗೆ ಮುತ್ತು ಕೊಡುವ ಪದ್ದತಿ ಇರದೆ ದೂರದಿಂದ ನಮಸ್ಕರಿಸುವ ರೀತಿಯನ್ನು ಅನುಸರಿಸಲಾಯಿತು. ಪೂಜೆಯ ನಂತರ ಯಾವುದೇ ಸಂಭ್ರಮ ಕಾರ್ಯಕ್ರಮಗಳು ಇರಲಿಲ್ಲಾ.

ಈ ಮಹಾ ಬಲಿದಾನದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭಾಗವಹಿಸಿ ವಂದನೆ ಮತ್ತು ಶುಭಾಷಯಗಳನ್ನು ಅರ್ಪಿಸಿದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ.ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ ಬಲಿದಾನದಲ್ಲಿ ಭಾಗವಹಿಸಿದರು. ಸಾಮಾಜಿಕ ಅಂತರದ ಕಾರಣಕ್ಕಾಗಿ ಒಂದೇ ಸಲ ಹೆಚ್ಚು ಭಕ್ತರು ಸೇರಬಾರದೆಂದು ಇಂದು ಡಿಸೆಂಬರ್ ೨೫ ರಂದು ಕೂಡ ೨ ಪೂಜೆಗಳನ್ನು ನಡೆಸಲಾಗುವುದೆಂದು ಪ್ರಧಾನರು ತಿಳಿಸಿದ್ದಾರೆ.

 

Comments are closed.