ಕರಾವಳಿ

ಅಪ್ಪಣ್ಣ ಹೆಗ್ಡೆ ಜನ್ಮ ದಿನಾಚರಣೆ: ಮೂವರು ವೈದ್ಯರಿಗೆ ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ

Pinterest LinkedIn Tumblr

ಕುಂದಾಪುರ: ಆಡುಮುಟ್ಟದ ಸೊಪ್ಪಿಲ್ಲ… ಅಪ್ಪಣ್ಣ ಹೆಗ್ಡೆಯವರು ಸೇವೆ ಮಾಡದ ಕ್ರೇತ್ರವಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಅಪ್ಪಣ್ಣ ಹೆಗ್ಡೆ ತೊಡಗಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. ತಮ್ಮ ಹುಟ್ಟುಹಬ್ಬದಲ್ಲಿ ಶೈಕ್ಷಣಿಕ ಪ್ರೋತ್ಸಾಹ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡುವಂತಹ ದೇವರು ಮೆಚ್ಚುವ ಕೆಲಸದ ಮೂಲಕ ಜನ್ಮದಿನ ಸಾರ್ಥಕ ಮಾಡಿಕೊಂಡಿದ್ದಾರೆ ಎಂದು ಹಿರಿಯ ರಾಜಕೀಯ ಮುತ್ಸದ್ದಿ ಎ.ಜಿ. ಕೊಡ್ಗಿ ಬಣ್ಣಿಸಿದ್ದಾರೆ.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಶ್ರೀ ಶಾರದಾ ಕಾಲೇಜು ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ಅಪ್ಪಣ್ಣ ಹೆಗ್ಡೆ ಜನ್ಮದಿನಾಚರಣೆ, ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ದತ್ತಿನಿಧಿ ವಿತರಣೆ ಕಾರ್‍ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಪ್ಪಣ್ಣೆ ಹೆಗ್ಡೆಯವರ ಒಡನಾಟ 5 ದಶಕದಿಂದ ಇದ್ದು, ರಾಜಕೀಯವಾಗಿ ನನ್ನನ್ನು ಬಲವಾಗಿ ಸಮರ್ಥನೆ ಮಾಡಿಕೊಂಡು ಬಂದಿದ್ದರು. ಧಾರ್ಮಿಕ ಕಾರ್‍ಯಕ್ರಮವಿರಲಿ, ರಾಜಕೀಯ ಇರಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಯಶಸ್ಸು ಪಡೆದಿದ್ದು, ಜನ್ಮದಿನ ಕೂಡಾ ಸಮಾಜಕ್ಕೆ ಮೀಸಲಿಟ್ಟಿರುವುದು ಬೇರೆಯವರಿಗೆ ಮಾರ್ಗದರ್ಶಿ ಎಂದು ಹೇಳಿದರು.

ಕೊರೋನಾ ಸೋಂಕಿತರ ಆರೈಕೆ ಮೂಲಕ ಸಹಸ್ರಾರು ಜನರ ಪ್ರಾಣ ಉಳಿಸಿದ ಉಡುಪಿ ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಮುಖ್ಯಸ್ಥ ಡಾ.ಶಶಿಕಿರಣ ಉಮಾಕಾಂತ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕುಂದಾಪುರ ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನುವಂಶೀಯ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶಶಿಕಿರಣ ಉಮಾಕಾಂತ್ ಕರೋನಾ ಚಿಕಿತ್ಸೆ ವೈದ್ಯರೊಬ್ಬರಿಂದ ಆದ ಕೆಲಸವಲ್ಲ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್‍ಯಕರ್ತೆಯರು ಕರೋನಾ ವಾರಿಯರ್‍ಸ್ ಪರಿಶ್ರಮ ಇದೆ. ಈ ಸನ್ಮಾನ ನನ್ನ ಮೂಲಕ ಕರೋನಾ ವಿರುದ್ಧ ಕೆಲಸ ಮಾಡಿದ ಎಲ್ಲಾ ಕರೋನಾ ಯೋಧರಿಗೆ ಸಲ್ಲುತ್ತದೆ ಎಂದು ಹೇಳಿದರು. ಡಾ.ನಾಗಭೂಷಣ ಉಡುಪ, ಡಾ.ನಾಗೇಶ್ ತಮಗೆ ಸಂದ ಪ್ರಶಸ್ತಿ ಆರೋಗ್ಯ ಕಾರ್‍ಯಕರ್ತರಿಗೆ ಸಮರ್ಪಿಸಿದರು.

ಕಮಲಶಿಲೆ ದೇವಸ್ಥಾನ ವತಿಯಿಂದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಮೂರನೇ ಹಣಕಾಸು ಸಮಿತಿ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಸನ್ಮಾನಿಸಿದರು. ವಿವಿಧ ಶಿಕ್ಷಣ ಇಲಾಖೆ ಮುಖ್ಯಸ್ಥರು ಸಮಾಜದ ಮುಂದಾಳುಗಳು ಅಪ್ಪಣ್ಣ ಹೆಗ್ಡೆ ಗೌರವಿಸಿದರು. ನಾಗರತ್ನಾ ಅಪ್ಪಣ್ಣ ಹೆಗ್ಡೆ ಇದ್ದರು.

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ ಆಡಳಿತ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಶ್ರೀ ಶಾರದಾ ಕಾಲೇಜ್ ಉಪನ್ಯಾಸಕಿ ಪ್ರಜ್ಞಾ ಪ್ರಭಾಕರ ಹೆಗ್ಡೆ ಪ್ರಾರ್ತಿಸಿದರು. ಬಸ್ರೂರು ನಿವೇದಿತಾ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ದಿನಕರ ಶೆಟ್ಟಿ ನಿರೂಪಿಸಿದರು. ಕುಂದಾಪುರ ತಾಪಂ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಕಾಲೇಜ್ ಪ್ರಾಂಶುಪಾಲೆ ಡಾ.ಚಂದ್ರಮತಿ ಶೆಟ್ಟಿ ವಂದಿಸಿದರು

 

Comments are closed.