ಕರಾವಳಿ

ಗ್ರಾ.ಪಂ. ಸಾರ್ವತ್ರಿಕ ಚುನಾವಣೆ – ನಿಷೇಧಾಜ್ಞೆ ಜಾರಿ

Pinterest LinkedIn Tumblr

ಉಡುಪಿ: ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಚುನಾವಣೆ-2020 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ಉಡುಪಿ, ಹೆಬ್ರಿ, ಬ್ರಹ್ಮಾವರ ಹಾಗೂ ಬೈಂದೂರು ತಾಲೂಕಿನಲ್ಲಿ ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 21 ರ ಸಂಜೆ 5 ಗಂಟೆಯಿಂದ ಡಿಸೆಂಬರ್ 22 ರ ಸಂಜೆ 5 ಗಂಟೆಯವರೆಗೆ ಹಾಗೂ ಡಿಸೆಂಬರ್ 27 ರಂದು ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿರುವುದರಿಂದ ಡಿಸೆಂಬರ್ 26 ರ ಸಂಜೆ 5 ಗಂಟೆಯಿಂದ ಡಿಸೆಂಬರ್ 27 ರ ಸಂಜೆ 5 ರ ವರೆಗೆ ಮತದಾನ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಪ್ರದತ್ತವಾದ ಅಧಿಕಾರದಂತೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಮತದಾನ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಮತದಾನ ಕಾರ್ಯಕ್ಕೆ ಬರುವ ಮತದಾರರನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಸಕಾರಣವಿಲ್ಲದೇ 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಿದೆ. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಹಾಗೂ ಪ್ರಸಾರ ಮಾಡುವುದು, ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವುದರಿಂದ, ಅಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವರೇ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.