ಕುಂದಾಪುರ: 45 ಕಿ.ಮೀ ಕರಾವಳಿ ತೀರ ಹಾಗೂ 110 ಕಿ.ಮೀ ಪಶ್ಚಿಮ ಘಟ್ಟ ಪ್ರದೇಶವನ್ನು ಹೊಂದಿರುವ ಬೈಂದೂರು ವಿಧಾನ ಸಭಾ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿ ಅತಿ ಹಿಂದುಳಿದ ಕ್ಷೇತ್ರವಾಗಿ ಈವರೆಗೆ ಗುರುತಿಸಿಕೊಂಡಿದೆ. ಸರಿಯಾದ ಸಂಪರ್ಕ ರಸ್ತೆ ಇಲ್ಲ. ಮೀನುಗಾರಿಕಾ ಬಂದರುಗಳಿಗೆ ಸರಿಯಾದ ಅವಕಾಶ ಇಲ್ಲ. ಶಾಲೆ ಇಲ್ಲ. ವಿದ್ಯುತ್ ಇಲ್ಲ ಎನ್ನುವ ಕೊರತೆಯನ್ನು ನಿವಾರಣೆ ಮಾಡುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಂಡ್ಸೆ ಸಮೀಪದ ನೆಂಪುವಿನ ಶಾಸಕರ ನಿವಾಸದಲ್ಲಿ ನಡೆದ ಮಂಗಳವಾರ ಸಂಜೆ ನಡೆದ ಬೈಂದೂರು ಮಂಡಲ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 38 ಗ್ರಾಮ ಪಂಚಾಯಿತಿಗಳಲ್ಲಿಯೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ದೊರಕುವಂತೆ ಮಾಡಬೇಕಾದ ಜವಾಬ್ದಾರಿ ಇದೆ. ಪ್ರತಿ ವಾರ್ಡ್‌ಗಳಲ್ಲಿಯೂ ಕನಿಷ್ಠ 4–5 ಮಂದಿ ಸ್ವರ್ಧಾ ಅಕಾಂಕ್ಷಿಗಳು ಇರುವುದರಿಂದ ಪಂಚಾಯಿತಿ ಅಭಿವೃದ್ಧಿ ಉದ್ದೇಶವನ್ನು ಹೊಂದಿರುವ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡುವ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಕ್ಷೇತ್ರದ ಅಭಿವೃದ್ಧಿಗೆ ಬಂದಿರುವ ಸರ್ಕಾರದ ಅನುದಾನದ ಕುರಿತು ಕಾರ್ಯಕರ್ತರು ಕ್ಷೇತ್ರದ ಜನರಿಗೆ ಮುಟ್ಟಿಸಬೇಕು. ಕುಡಿಯುವ ನೀರು, ರಸ್ತೆ, ವೆಟೆಂಡ್ ಡ್ಯಾಮ್, ಮೀನುಗಾರಿಕಾ ಬಂದರು ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗಿದೆ. ಅರೆಶಿರೂರಿನಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ 12 ಎಕ್ರೆ ಜಾಗ ಗುರುತಿಸಲಾಗಿದೆ. ಸಿದ್ದಾಪುರದಲ್ಲಿ ಮೂರಾರ್ಜಿ ದೇಸಾಯಿ ಶಾಲೆಗೆ 18 ಕೋಟಿ ಮಂಜೂರಾತಿ ದೊರೆಕಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳೇ ಬೇರೆ. ಗ್ರಾಮ ಪಂಚಾಯಿತಿ ಚುನಾವಣೆಯೇ ಬೇರೆ. ಈ ಚುನಾವಣೆಯ ವೇಳೆ ಅನೇಕ ಸ್ಥಳೀಯ ಸಮಸ್ಯೆಗಳು ಸೇರಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಚಿಹ್ನೆ ಇರುವುದಿಲ್ಲ. ನಮ್ಮ ಎದುರಾಳಿಗಳು ಇದನ್ನೇ ಪ್ರಮುಖವಾಗಿರಿಸಿಕೊಂಡು ಪಕ್ಷದ ಪರವಾದ ಮತದಾರರನ್ನು ಗೊಂದಲಕ್ಕೀಡುಮಾಡಿ ಚುನಾವಣೆಯಲ್ಲಿ ಲಾಭ ಗಿಟ್ಟಿಸಿಕೊಳ್ಳುತ್ತಾರೆ. ಈ ಬಾರಿ ಹಾಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಗ್ರಾಮ ಮಟ್ಟದಲ್ಲಿಯೂ ಸೋಲಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ನುಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಕಲ್ಮಾಡಿ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಇಂದಿರಾ ಶೆಟ್ಟಿ. ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುರೇಶ್ ಬಟ್ವಾಡಿ, ಶೋಭಾ ಪುತ್ರನ್, ರೋಹಿತ್‌ಕುಮಾರ ಶೆಟ್ಟಿ, ಬೈಂದೂರು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಕೆ. ರಾಜ್ಯ ಯೋಜನಾ ಮಂಡಳಿ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ, ಪಕ್ಷದ ಪ್ರಮುಖರಾದ ಮಾಲತಿ ನಾಯ್ಕ್, ಬಾಲಚಂದ್ರ ಭಟ್ ಇದ್ದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಕಿಶೋರ್‌ಕುಮಾರ್ ವಂದಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಪ್ರಿಯದರ್ಶಿನಿ ನಿರೂಪಿಸಿದರು.