ಕರಾವಳಿ

ದನ ಮೇಯಲು ಬಿಟ್ಟ ವಿಚಾರದಲ್ಲಿ ಹಲ್ಲೆ: ಆರೋಪ ಸಾಭೀತು, 15 ಸಾವಿರ ದಂಡ

Pinterest LinkedIn Tumblr

ಕುಂದಾಪುರ: ಮನೆಯ ಹಕ್ಕಲು ಜಾಗಕ್ಕೆ ದನ ಮೇಯಲು ಬಿಟ್ಟ ವಿಚಾರದಲ್ಲಿದ್ದ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳು ಸಾಭೀತಾಗಿದ್ದು ಇಬ್ಬರು ಆರೋಪಿಗಳಿಗೆ 15 ಸಾವಿರ ದಂಡ ವಿಧಿಸಿ ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ನಾಗರತ್ನಮ್ಮ ಆದೇಶ ನೀಡಿದ್ದಾರೆ.

2010 ಅಕ್ಟೋಬರ್ 19 ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಆಜ್ರಿ ಚೌಕುಳಮಕ್ಕಿ ಎಂಬಲ್ಲಿ ದೂರುದಾರ ಲಕ್ಷ್ಮಣ ರಾವ್ ಎನ್ನುವರು ಹೋಗುತ್ತಿದ್ದಾಗ ಆರೋಪಿಗಳಾದ ಸಾಕಮ್ಮ ಹಾಗೂ ಮಂಜುನಾಥ ಎನ್ನುವರು ಲಕ್ಷ್ಮಣ ಅವರನ್ನು ಅಡ್ಡಗಟ್ಟಿ ಅವ್ಯಾಚ ಶಬ್ದದಿಂದ ನಿಂದಿಸಿ ಕತ್ತಿ ಹಾಗೂ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಪಿಎಸ್ಐ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ 10 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಆರೋಪ ಸಾಭೀತಾಗಿದೆ. ಐಪಿಸಿ‌ ಕಲಂ 341 (ಅಡ್ಡಗಟ್ಟಿದ್ದಕ್ಕೆ) ತಲಾ 500 ದಂಡ, ಐಪಿಸಿ 324(ಹಲ್ಲೆ ನಡೆದಿದ್ದಕ್ಕೆ) ತಲಾ 3000ರೂ ದಂಡ, 504 (ಅವ್ಯಾಚ ಶಬ್ದದಿಂದ ನಿಂದನೆ) ತಲಾ 2000 ರೂ, ಐಪಿಸಿ ಸೆಕ್ಷನ್ 506 (ಬೆದರಿಕೆ) ತಲಾ 2000 ರೂ. ದಂಡ ವಿಧಿಸಿದ್ದು ದಂಡದ ಮೊತ್ತದಲ್ಲಿ 10 ಸಾವಿರ ಹಣವನ್ನು ಸಂತ್ರಸ್ತ ದೂರುದಾರ ವ್ಯಕ್ತಿಗೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಪ್ರಾಸಿಕ್ಯೂಶನ್ ಪರವಾಗಿ ಕಾನೂನು ಅಧಿಕಾರಿ (ಕಿರಿಯ) ಮಮ್ತಾಜ್ ವಾದ ಮಂಡಿಸಿದ್ದರು.

Comments are closed.