ಕರಾವಳಿ

ವಿದೇಶಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರುವ ಗೋವಾ ಕಡಲ ತೀರಗಳು

Pinterest LinkedIn Tumblr


ಕಾರವಾರ; ಹಿಂದೆಂದು ಕಾಣದ ವಿದೇಶಿ ಪ್ರವಾಸಿಗರ ಕೊರತೆಯನ್ನು ಗೋವಾ ರಾಜ್ಯ ಅನುಭವಿಸುತ್ತಿದೆ. ಪ್ರವಾಸೋದ್ಯಮದಲ್ಲಿ ತನ್ನದೆ ಛಾಪು ಮೂಡಿಸಿ ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಗೋವಾ ರಾಜ್ಯಕ್ಕೆ ಈ ಬಾರಿ ಪ್ರವಾಸಿಗರ ಕೊರತೆ ಎದ್ದು ಕಾಣುತ್ತಿದೆ. ವಿದೇಶಿಗರಿಲ್ಲದ ಗೋವಾ ಪ್ರವಾಸೋದ್ಯಮ ಸಪ್ಪೆ ಆಗಿ ಮುಂದುವರೆದಿದೆ.

ಕೊರೋನಾ ಮಹಾಮಾರಿಗೆ ಗೋವಾ ರಾಜ್ಯದ ಪ್ರವಾಸೋದ್ಯಮ ನೆಲಕಚ್ಚಿಹೋಗಿದೆ. ಇನ್ನೇನು ಗೋವಾ ಪ್ರವಾಸೋದ್ಯಮ ಚೇತರಿಕೆ ಕಾಣಬೇಕು ಎಂದರೆ ಕನಿಷ್ಠ ಪಕ್ಷ ಒಂದು ವರ್ಷ ಬೇಕು. ವಿದೇಶಿ ಪ್ರವಾಸಿಗರಿಂದಲೇ ಪ್ರವಾಸೋದ್ಯಮದಲ್ಲಿ ಆರ್ಥಿಕ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದ ಗೋವಾ ರಾಜ್ಯಕ್ಕೆ ಈ ಬಾರಿ ಗೋವಾ ಬಾರಿ ನಷ್ಟ ಎದುರಿಸಲಿದೆ. 2020ರ ಬೇಸಿಗೆ ಪ್ರವಾಸಿ ಹಂಗಾಮು 3 ತಿಂಗಳು ಬಾಕಿ ಇರುವಾಗಲೇ ಲಾಕ್ ಡೌನ್ ಆಗಿದ್ದರಿಂದ ಸಂಪೂರ್ಣವಾಗಿ ಪ್ರವಾಸೋದ್ಯಮವನ್ನು ಕೊರೋನಾ ಮಹಾಮಾರಿ ಕಿತ್ತು ತಿಂದಿತ್ತು. ಈಗ ಲಾಕ್ ಡೌನ್ ಸಡಿಲಿಕೆ ಬಳಿಕ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರುತ್ತಿವೆ. ಆದರೆ ಗೋವಾದಲ್ಲಿ ಎಷ್ಟೇ ವೇಗವಾಗಿ ಪ್ರವಾಸೋದ್ಯಮ ಚುರುಕು ಪಡೆದರೂ ವಿದೇಶಿಯರ ಕೊರತೆ ಮಾತ್ರ ಎದ್ದು ಕಾಣುತ್ತಿದೆ.

ನವೇಂಬರ್ ತಿಂಗಳು ಬಂತು ಎಂದರೆ ಸಾಕು ಗೋವಾದ ಪ್ರಮುಖ ಕಡಲ ತೀರಗಳು ವಿದೇಶಿ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿತ್ತು. ಆದರೆ ಈಗ ವಿದೇಶಿಗರಿಲ್ಲದ ಕಡಲ ತೀರ ಒಂದಿಷ್ಟು ದೇಶೀಯ ಪ್ರವಾಸಿಗರ ಮೋಜುಮಸ್ತಿಗೆ ವೇದಿಕೆ ಆಗಿದೆ ಅಷ್ಟೇ.

ಮಳೆಗಾಲದ ಎರಡು ತಿಂಗಳು ಹೊರತುಪಡಿಸಿದರೆ ದಿನನಿತ್ಯವೂ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಕಲರವ ಕಾಣುತ್ತಿದ್ದ ಗೋವಾ ರಾಜ್ಯದ ಪ್ರಮುಖ ಕಡಲ ತೀರಗಳಲ್ಲಿ ಈಗ ಪ್ರವಾಸಿ ಸೀಸನ್ ಆರಂಭವಾಗಿದ್ದರೂ ಕಡಿಮೆ ಪ್ರಮಾಣದಲ್ಲೇ ದೇಶೀಯ ಪ್ರವಾಸಿಗರು ಮಾತ್ರ ಕಾಣುತ್ತಿದ್ದಾರೆ ಹೊರತು ವಿದೇಶಿ ಪ್ರವಾಸಿಗರ ಕಲರವ ಮಾಯವಾಗಿದೆ. ಗೋವಾ ರಾಜ್ಯದ ಬಾಗಾ, ಪಾಲೋಲೆಮ್, ಕಲಂಗುಟ್, ಹಾರಂಬೋಲ್, ವಾಗಾತೋರ್, ಮಿರಾಮಾರ್, ಅಂಜೂನಾ, ಕಾಂದೋಲಿಮ್ ಕಡಲ ತೀರಗಳು ಪ್ರವಾಸಿಗರ ಹಾಟ್ ಸ್ಪಾಟ್. ಆದರೆ ಈಗ ಅಲ್ಲಿ ನಿರೀಕ್ಷೆಯಷ್ಟು ಪ್ರವಾಸಿಗರಿಲ್ಲದೆ ಕಡಲ ತೀರದ ಸುತ್ತಮುತ್ತ ತಾತ್ಕಾಲಿಕ ಹೋಟೆಲ್, ಶ್ಯಾಕ್ಸ್ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ ಇಲ್ಲಿನ ಉದ್ಯಮಿಗಳು.

ಶ್ಯಾಕ್ಸ್ ಹಾಕಲು ಹಿಂದೇಟು, ಟ್ಯಾಕ್ಸಿ ಕ್ಯಾಬ್ ಮಾಲೀಕರು ಸಪ್ಪೆ!

ಕಡಲ ತೀರದಂಚಿನಲ್ಲಿ ಅಲಂಕಾರಿಕವಾಗಿ ಪ್ರವಾಸಿಗರನ್ನು ಸೆಳೆಯಲು ನಿರ್ಮಾಣವಾಗುತ್ತಿದ್ದ ಶ್ಯಾಕ್ಸ್ ಸಂಖ್ಯೆ ಕೂಡ ಈ ಬಾರಿ ಕಡಿಮೆ ಆಗಲಿದೆ. ವಿದೇಶಿ ಪ್ರವಾಸಿಗರನ್ನೇ ನೆಚ್ಚಿಕೊಂಡು ಶ್ಯಾಕ್ಸ್ ತೆರಯುತ್ತಿದ್ದ ಹೊಟೇಲ್ ಉದ್ಯಮಿಗಳು ಈ ಬಾರಿ ಗೊಂದಲದಲ್ಲಿ ಇದ್ದಾರೆ. ಹಾಗೆಯೇ ವಿದೇಶಿಗರನ್ನು ಬೇರೆ ಬೇರೆ ಕಡೆ ಕರೆದೊಯ್ಯಲು ಇದ್ದ ದುಬಾರಿ ಬೆಲೆಯ ಕ್ಯಾಬ್ ಮಾಲೀಕರು ಈಗ ಕಂಗಲಾಗಿದ್ದಾರೆ. ವಿದೇಶಿ ಪ್ರವಾಸಿಗರ ಆಗಮನ ಈ ವರ್ಷ ದೂರದ ಮಾತಾಗಿದ್ದು, ಸಂಪೂರ್ಣ ನಷ್ಟದ ಹಾದಿಯಲ್ಲೇ ದಿನ ದೂಡುತ್ತಿದ್ದಾರೆ.

ಹೋಟೆಲ್ ಉದ್ಯಮ ಆರಂಭವಾಗಿದೆ. ಆದರೆ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸಲು ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದೆ. ಗೋವಾ ರಾಜ್ಯದಲ್ಲಿ ಸಾಮಾನ್ಯವಾಗಿ ಜೈಪುರ, ನಾಗಪುರ, ಪಂಜಾಬಿ, ಹೀಗೆ ಹೊರ ರಾಜ್ಯದ ಕಾರ್ಮಿಕರೇ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ನೇಪಾಳಿಯನ್ ಕಾರ್ಮಿಕರು ಅಧಿಕವಾಗಿ ಇದ್ದರು. ಇವರೆಲ್ಲ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ತಮ್ಮ ಊರು ಸೇರಿಕೊಂಡಿದ್ದಾರೆ. ಮತ್ತೆ ಗೋವಾಕ್ಕೆ ಬಂದು ಮನೆ ಬಾಡಿಗೆ ಮಾಡಿ ಉಳಿದುಕೊಳ್ಳೋದು ಕಷ್ಟ. ಹೀಗಾಗಿ ಇಲ್ಲಿನ ಹೋಟೆಲ್ ಉದ್ಯಮ ಕೂಡ ಕಾರ್ಮಿಕರಿಲ್ಲದೆ ಸೊರಗಿದೆ.

ಒಟ್ಟಾರೆ ಒಂದು ಕಾಲದಲ್ಲಿ ರಾಜನಂತೆ ಮೆರೆದಿದ್ದ ಗೋವಾ ರಾಜ್ಯದ ಪ್ರವಾಸೋದ್ಯಮ ಕಣ್ಣಿಗೆ ಕಾಣದ ಕೊರೋನಾ ವೈರಸ್​ನಿಂದಾಗಿ ಇಡೀ ಪ್ರವಾಸೋದ್ಯಮದ ಚಿತ್ರಣವನ್ನೇ ತಲೆಕೆಳಗು ಮಾಡಿದೆ.

Comments are closed.