ಇಂದೋರ್: ಪ್ರೀತಿಸಿದ ಹುಡುಗನೊಂದಿಗೆ ಮದುವೆಗೆ ಅಮ್ಮ ನಿರಾಕರಿಸಿದಳೆಂದು ಅಪ್ರಾಪ್ತೆಯೊಬ್ಬಳು ರಸ್ತೆ ಮೇಲಿನ ಫ್ಲೆಕ್ಸ್ ಬೋರ್ಡ್ ಹತ್ತಿ ಆತಂಕ ಸೃಷ್ಟಿಸಿದ್ದಾಳೆ.
ಮಧ್ಯಪ್ರದೇಶದ ಇಂಡೋರ್ನ ಪರ್ದೇಸಿಪುರದಲ್ಲಿ ಈ ಘಟನೆ ನಡೆದಿದೆ. ನಗರದ ಬಂಡಾರಿ ಸೇತುವೆ ಬಳಿಯಿದ್ದ ಹೋರ್ಡಿಂಗ್ ಮೇಲೆ ಕುಳಿತಿದ್ದಾಳೆ. ಯುವತಿ ಇನ್ನು ಅಪ್ರಾಪ್ತಳಾಗಿದ್ದು, ತಾಯಿ ಮದುವೆಗೆ ಒಪ್ಪಲಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಸಮಯದಲ್ಲಿ ಯುವತಿ ಈ ರೀತಿ ಹೋರ್ಡಿಂಗ್ ಮೇಲೆ ಹತ್ತಿ ಕುಳಿತಿದ್ದು, ಆರಾಮಾಗಿ ಮೊಬೈಲ್ ನೋಡುತ್ತಿದ್ದಳು ಎಂದು ಎಎನ್ಐ ವರದಿ ಮಾಡಿದೆ.
ಯುವತಿ ಹೋರ್ಡಿಂಗ್ ಮೇಲೆ ಹತ್ತಿದ್ದು, ಕೆಲ ಸ್ಥಳೀಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸದಾ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ ಈ ರೀತಿ ಯುವತಿ ಹತ್ತಿ ಕುಳಿತಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ಕಳೆಗಿಳಿಯುವಂತೆ ಮನವಿ ಮಾಡಿದರು. ಆದರೆ, ಹುಡುಗಿ ಯಾವ ಮಾತಿಗೂ ಜಗ್ಗದೇ ಸುಮ್ಮನೆ ಕುಳಿತಿದ್ದಳು. ಕಡೆಗೆ ಪೊಲೀಸರು ವಿಷಯ ತಿಳಿದು ಹುಡುಗಿ ಪ್ರೀತಿಸುತ್ತಿದ್ದ ಯುವಕನನ್ನು ಸ್ಥಳಕ್ಕೆ ಕರೆಯಿಸಿದರು.
ತಾನು ಮದುವೆಯಾಗ ಬೇಕು ಎಂದು ಇಚ್ಛಿಸಿದ್ದ ಯುವಕ ಸ್ಥಳಕ್ಕೆ ಆಗಮಿಸಿದ ಬಳಿಕ ಯುವತಿ ಕೆಳಗಿಳಿಸಿದ್ದಾಳೆ. ಘಟನೆ ಬಳಿಕ ಮಾತನಾಡಿದ ಎಸ್ಐ ಅಶೋಕ್ ಪತಿದಾರ್, ಯುವತಿ ಇನ್ನು ಅಪ್ರಾಪ್ತೆಯಾಗಿದ್ದು, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಮುಂದೆ ಇದೇ ಹುಡುಗನನ್ನು ಮದುವೆಯಾಗುವುದಾಗಿ ತಾಯಿಗೆ ತಿಳಿಸಿದ್ದಳು. ಆದರೆ, ತಾಯಿ ಇದಕ್ಕೆ ವಿರೋಧಿಸಿದ್ದರಿಂದ ಈ ರೀತಿ ಎಲ್ಲರಿಗೂ ಆತಂಕ ಸೃಷ್ಟಿಸುವ ಕೆಲಸ ಮಾಡಿದ್ದಾಳೆ ಎಂದರು.