ಕರಾವಳಿ

ಕರ್ನಾಟಕ ಬಂದ್- ಬಿಜೆಪಿ ಸರಕಾರದ ವಿರುದ್ಧ ಕುಂದಾಪುರದಲ್ಲಿ ಪ್ರತಿಭಟನಾಕಾರರ ವಾಗ್ದಾಳಿ!

Pinterest LinkedIn Tumblr

ಕುಂದಾಪುರ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗೀಕರಿಸಿರುವ ಕೃಷಿ ಸಂಬಂಧಿ ಕಾನೂನುಗಳು ರೈತ ವಿರೋಧಿ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಸೋಮವಾರ ಮಧ್ಯಾಹ್ನದ ಸುಮಾರಿಗೆ ಸಿಪಿಐಎಂ ಕುಂದಾಪುರ ವಲಯ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ಕುಂದಾಪುರ ಘಟಕ, ಸಿಐಟಿಯು, ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಕುಂದಾಪುರ, ಡಿ.ವೈ.ಎಫ್.ಐ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಗಾರರ ಸಂಘದ ವತಿಯಿಂದ ನಗರದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

 

ಈ ಸಂದರ್ಭ ಮಾತನಾಡಿದ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತನಾಡಿ, ಬಿಜೆಪಿ ಸರಕಾರ ಉಳುವವನೇ ಭೂಮಿಗೆ ಒಡೆಯ ಎನ್ನುವ ಕಾನೂನು ಬಿಟ್ಟು ಉಳ್ಳವನೇ ಭೂಮಿಗೆ ಒಡೆಯ ಎಂಬುದನ್ನು ಮಾಡುತ್ತಿದೆ. ಬಿಜೆಪಿ ಸರಕಾರ ಬಂದವಾಳಶಾಹಿಗಳು, ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು ಸಂಪೂರ್ಣ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ತಮ್ಮ ಹಕ್ಕಿಗಾಗಿ ಹೋರಾಟ ಮಾಡುವರ ವಿರುದ್ಧ ಇಲಾಖೆಯಿಂದ ಹತ್ತಿಕ್ಕಿ ಅವರ ಧ್ವನಿ ಅಡಗಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ದಲಿತರು, ಬಡವರು, ರೈತರ ಪರವಾಗಿದ್ದೇವೆ ಎಂಬುದು ಕೇವಲ ಹೇಳಿಕೆಗೆ ಮಾತ್ರವೇ ಸೀಮಿತವಾಗಿದೆ. ಸಂವಿಧಾನ ಬದಲಾವಣೆ ಮಾಡಿ ಉಳ್ಳವರನ್ನು ಬೆಳೆಸಿ ದಲಿತ ದಮನಿತರನ್ನು ಹಿಮ್ಮೆಟ್ಟಿಸುವ ಷಡ್ಯಂತ್ರ ಮಾಡುತ್ತಿದೆ. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಕೊರೋನಾದಂತಹ ಸಂದರ್ಭದಲ್ಲೂ ಹಣ ಮಾಡಲು ಹೊರಟ ಈ ಸರಕಾರವನ್ನು ಬದಲಾವಣೆ ಮಾಡುವ ಶಪಥ ಮಾಡಬೇಕು ಎಂದು ಹರಿಹಾಯ್ದರು.

ಉಡುಪಿ ಜಿಲ್ಲಾ ರೈತ ಸಂಘದ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಸರಕಾರವಿಲ್ಲ, ಬದಲಾಗಿ ಎಜೆನ್ಸಿ ಕೆಲಸ ಮಾಡುತ್ತಿದೆ. ದೇಶವನ್ನು ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ. ಕಾರ್ಪೋರೇಟ್ ವ್ಯವಸ್ಥೆಗೆ ಸರಕಾರ ಮಂಡಿಯೂರಿದ್ದು ರೈತರ ಪರವಾಗಿ ಈ ಮಸೂದೆ ಮಾಡಿಲ್ಲ. ಇಂದಿರಾ ಗಾಂಧಿಯವರ ಉಳುವವನೆ ಹೊಲದೊಡೆಯ ಕಾರ್ಯಕ್ರಮವನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಚಾಚುತಪ್ಪದೆ ಜಾರಿಗೆ ತಂದು ಜೀತಪದ್ದತಿ ವ್ಯವಸ್ಟೆ ಕಿತ್ತೊಗೆದಿದ್ದರು. ಕೂಲಿಕಾರ್ಮಿಕರಾಗಿ ಜಮೀನ್ದಾರರ ಹೊಲದಲ್ಲಿ ದುಡಿಯುತ್ತಿದ್ದವರಿಗೆ ಆಸ್ತಿಯ ಹಕ್ಕನ್ನು ಕೊಟ್ಟು ಭೂಮಾಲೀಕರನ್ನಾಗಿ ಮಾಡಿದ್ದರು. ಇಂದು ಅದೇ ಭೂಮಿಯನ್ನು ರೈತರಿಂದ ಕಸಿದು ಶ್ರೀಮಂತರಿಗೆ ನೀಡಿ ಪುನಃ ಜೀತಪದ್ದತಿ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲು ಯತ್ನಿಸಿದೆ ಎಂದು ಅವರು ಆರೋಪಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಬದಲಾಯಿಸುವ ವ್ಯವಸ್ಥಿತ ಹುನ್ನಾರ ಕೂಡ ನಡೆಯುತ್ತಿದೆ. ರೈತರು, ದಲಿತ-ದಮನಿತರ ಕಣ್ಣಿರು ಸುಳ್ಳಿನ ರಾಜಕಾರಣವನ್ನು ಉಳಿಸೋದಿಲ್ಲ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ಜನವಿರೋಧಿ ನೀತಿಗಳ ಮೂಲಕ ನಿತ್ಯವೂ ಆಡಳಿತ ವೈಫಲ್ಯವನ್ನು ಎದ್ದುತೋರಿಸುತ್ತಿದೆ. ನಾಲ್ಕು ಬಾರಿ ಹಸಿರು ಶಾಲು ಹೊದ್ದು ತಾನು ರೈತಪರ ಮುಖ್ಯಮಂತ್ರಿ ಎಂದು ಹೇಳಿಕೊಂಡ ಸಿಎಂ ಯಡಿಯೂರಪ್ಪ ಅವರ ಕಪಟ ನಾಟಕದ ವಿರುದ್ಧ ಹೋರಾಟ ಮಾಡಬೇಕಿದೆ. ಕಾರ್ಪೋರೇಟ್ ಕಂಪೆನಿಗಳ ಕೈಗೆ ರೈತರ ಬದುಕು ಕೊಡುವುದು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ಈ ಸಂದರ್ಭ ಸಿಪಿಐಎಂ ಜಿಲ್ಲಾ ಮುಖಂಡ ಕೆ. ಶಂಕರ್, ಸಿಐಟಿಯು ಮುಖಂಡ ಎಚ್. ನರಸಿಂಹ, ದಲಿತ ಮುಖಂಡ ವಿಜಯ್ ಕೆ.ಎಸ್., ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ಯಾಮಲಾ ಭಂಡಾರಿ, ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಡಿ, ವಿನೋದ್ ಕ್ರಾಸ್ತಾ, ಗಣೇಶ್ ಶೇರುಗಾರ್, ಕುಂದಾಪುರ ಪುರಸಭಾ ಸದಸ್ಯ ಕೆ.ಜಿ ನಿತ್ಯಾನಂದ, ಸಿಐಟಿಯುನ ಮಹಾಬಲ ವಡೇರಹೋಬಳಿ ಮೊದಲಾದವರು ಇದ್ದರು.

 

 

Comments are closed.