ಉತ್ತರ ಕನ್ನಡ(ಜು.08): ರಾಜ್ಯದ ಹಲವೆಡೆ ಕಳೆದ ಹಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆರಾಯ ತನ್ನ ಆರ್ಭಟ ತೋರಿಸುತ್ತಿದ್ದಾನೆ. ಮುಂದಿನ ಕೆಲವು ದಿನ ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶಗಳ ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಗಂಗಾವಳಿ ನದಿಯು ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿಯಲ್ಲಿ ಸಮುದ್ರ ಮತ್ತು ನದಿಪಾತ್ರದ ಜನರು ಇದ್ದಾರೆ. ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ಇನ್ನು, ಕಡಲ ಅಬ್ಬರ ಜೋರಾಗಿರುವ ಹಿನ್ನೆಲೆ, ಸಾಂಪ್ರದಾಯಿಕ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇಷ್ಟೇ ಅಲ್ಲದೇ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಗುಡ್ಡ ಕುಸಿಯುವ ಭೀತಿಯೂ ಹೆಚ್ಚಾಗಿದೆ.ಇನ್ನೂ ನಾಲ್ಕು ದಿನಗಳ ಕಾಲ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು, ಬಯಲು ಸೀಮೆ ಮಂಡ್ಯ ಮತ್ತು ಮೈಸೂರು ಭಾಗಗಳಲ್ಲೂ ಮಳೆರಾಯನ ಆರ್ಭಟ ಹೆಚ್ಚಾಗಿದೆ. ಕೇರಳ ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ, ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ಒಳಹರಿವು 10 ಸಾವಿರ ಕ್ಯೂಸೆಕ್ ದಾಟಿದೆ. ಈ ಕಬಿನಿ ಜಲಾಶಯವು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿದೆ.
ಇನ್ನು, ಕೊಡಗಿನಲ್ಲಿ ಮುಂಗಾರು ಮಳೆ ಚುರುಕಾದ ಹಿನ್ನೆಲೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್.ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ಮಟಟ್ 100 ಅಡಿ ದಾಟಿದೆ. ಜಲಾಶಯಕ್ಕೆ 9 ಸಾವಿರ ಕ್ಯೂಸೆಕ್ ನೀರಿನ ಪ್ರಮಾಣ ಏರಿಕೆಯಾಗಿದೆ.
ಜುಲೈ ಮೊದಲ ವಾರದಲ್ಲೇ ನೀರಿನ ಮಟ್ಟ 100ಅಡಿ ಗಡಿ ದಾಟಿದೆ. ಜಲಾಶಯದ ನೀರಿನ ಮಟ್ಟ ಏರಿಕೆಯಿಂದ ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿದೆ.
Comments are closed.