ಕರಾವಳಿ

ಪತ್ರಕರ್ತ ಮೊಹಮ್ಮದ್ ಅನ್ಸಾರ್ ಅವರಿಗೆ ‘ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ’ : ನಾಳೆ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ಜೂನ್.30: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾನವೀಯ ವೌಲ್ಯ ಮತ್ತು ಸೌಹಾರ್ದತೆಯನ್ನು ಬಿಂಬಿಸುವ ವರದಿಗೆ ಪತ್ರಕರ್ತರಿಗೆ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯ ಮೊಹಮ್ಮದ್ ಅನ್ಸಾರ್ ಇನೋಳಿ ಆಯ್ಕೆಯಾಗಿದ್ದಾರೆ.

ವಿಜಯವಾಣಿಯಲ್ಲಿ 2019, ಮೇ 21ರಂದು ಪ್ರಕಟಗೊಂಡ ‘ ಸಂಬಂಧ ಗಟ್ಟಿಗೊಳಿಸಿದ ರಮಜಾನ್ ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ. 5,001 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಹಿರಿಯ ಪತ್ರಕರ್ತರಾದ ಸುರೇಂದ್ರ ಶೆಟ್ಟಿ, ರವಿಪ್ರಸಾದ್ ಕಮಿಲ ಮತ್ತು ಉಪನ್ಯಾಸಕಿ ಸ್ಮಿತಾ ಶೆಣೈ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಈ ಆಯ್ಕೆ ನಡೆಸಿದೆ.

ಜುಲೈ1ರಂದು ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಜುಲೈ 1ರಂದು ಪತ್ರಿಕಾ ದಿನಾಚರಣೆ :

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಜುಲೈ 1ರಂದು ಬೆಳಗ್ಗೆ 11:00ರಿಂದ ಲೇಡಿಹಿಲ್‌ನ ಪತ್ರಿಕಾ ಭವನದಲ್ಲಿ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ(ಪರೀಕ್ಷಾಂಗ) ಡಾ.ಪಿ.ಎಲ್ ಧರ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ಪತ್ರಕರ್ತರಾದ ಸುರೇಶ್ ಬೆಳಗಜೆ ‘ಪತ್ರಕರ್ತ, ಪತ್ರಿಕೋದ್ಯಮ ಮತ್ತು ಪ್ರಸ್ತುತತೆ ’ಬಗ್ಗೆ ಉಪನ್ಯಾಸ ನೀಡಲಿರುವರು. ಮೆಸ್ಕಾಂನ ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಕೃಷ್ಣಮೂರ್ತಿ ಅವರು ಸಂಘದ ಎರಡನೇ ವರ್ಷದ ಬ್ರ್ಯಾಂಡ್ ಮಂಗಳೂರು’ಪ್ರಶಸ್ತಿ ಪ್ರದಾನ ಮಾಡಲಿರುವರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮತ್ತು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ ಭಾಗವಹಿಸಲಿದ್ದಾರೆ.

Comments are closed.