ಅಂತರಾಷ್ಟ್ರೀಯ

ದುಬಾಯಿಯಿಂದ ಮಂಗಳೂರಿಗೆ ಹೊರಟ ಮೊದಲ ವಿಮಾನ: ರಾತ್ರಿ 10:10ಕ್ಕೆ ಏರ್‌ಪೋರ್ಟ್ ತಲುಪಲಿದ್ದಾರೆ 176 ಪ್ರಯಾಣಿಕರು

Pinterest LinkedIn Tumblr

 ಮಂಗಳೂರು, ಮೇ.12: ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕರೆತರಲು ಹೊರಟ ಮೊದಲ ವಿಮಾನ ದುಬಾಯಿಯಿಂದ ಇಂದು ಸಂಜೆ ಭಾರತೀಯ ಕಾಲಮಾನ 05.10ಕ್ಕೆ ಹೊರಟಿದೆ.

ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕಳಿಸಲು ಮುಖ್ಯ ಕಾರಣ ಕರ್ತರಾದ ದುಬಾಯಿ ಇಲ್ಲಿನ ಪ್ರತಿಷ್ಠಿತ ಹೊಟೇಲು ಉದ್ಯಮಿ, ಫರ್ಚೂನ್ ಸಮೂಹದ ಆಡಳಿತ ನಿರ್ದೇಶಕ, ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿ ಮೂಲತಃ ಕರ್ನಾಟಕ ಎನ್‌ಆರ್‌ಐ ಫೋರಂ-ಯು‌ಎ‌ಇ (ಕರ್ನಾಟಕ ಅನಿವಾಸಿ ಭಾರತೀಯಸಮಿತಿ ಯು‌ಎ‌ಇ) ಅಧ್ಯಕ್ಷ ಪ್ರವೀಣ್‌ ಕುಮಾರ್ ಶೆಟ್ಟಿ ವಕ್ವಾಡಿ ಅವರು ಮೊದಲ ವಿಮಾನದಲ್ಲಿ ಹೊರಟ ಭಾರತೀಯ ಪ್ರಯಾಣಿಕರಿಗೆ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರುವ ಮೂಲಕ ಬೀಳ್ಕೊಟ್ಟರು. ಈ ಸಂದರ್ಭ ದುಬಾಯಿ ಎಂಬೆಸಿಯ ಅಧಿಕಾರಿಗಳು ಹಾಗೂ ಏರ್ ಇಂಡಿಯಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವೀಣ್‌ ಕುಮಾರ್ ಶೆಟ್ಟಿ ವಕ್ವಾಡಿ ಅವರ ಈ ಒಂದು ಅಭೂತಪೂರ್ವ ಕಾರ್ಯಕ್ಕೆ ದುಬಾಯಿಯಲ್ಲಿ ಹಲವಾರು ಮಂದಿ ಕೈಜೋಡಿಸದ್ದಾರೆ.

ದುಬೈ ಅನಿವಾಸಿ ಕನ್ನಡಿಗರ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಎನ್ಆರೈ ಫೋರಂ ನೇತೃತ್ವದಲ್ಲಿ ಸತತವಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ದುಬೈ ಕಾನ್ಸುಲೇಟ್ ಜನರಲ್ ರನ್ನು ಸಂಪರ್ಕಿಸಿ ಪರಿಸ್ಥಿತಿಯ ತೀವ್ರತೆಯ ಬಗ್ಗೆ ತಿಳಿಸಿ ಒತ್ತಡ ತಂದ ಹಿನ್ನೆಲೆಯಲ್ಲಿ ಈ ಒಂದು ಸಾಧನೆ ಸಾಧ್ಯವಾಗಿದೆ. ಈ ಒಂದು ಸೇವಾ ಕಾರ್ಯದಲ್ಲಿ ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ನಿರತರಾಗಿರುವ  ದುಬೈ ಅನಿವಾಸಿ ಕನ್ನಡಿಗರ ಅಧ್ಯಕ್ಷ ನವೀದ್ ಮಾಗುಂಡಿ, ಬಿಸಿಸಿಐ ಯುಎಈ ಘಟಕದ ಉಪಾಧ್ಯಕ್ಷ ಹಿದಾಯತ್ ಅಡ್ಡೂರು, ದುಬಾಯಿಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಕರ್ನಾಟಕ ಮೀಡಿಯಾ ಫೋರಂ ಅಧ್ಯಕ್ಷ ಇಮ್ರಾನ್ ಖಾನ್, ಕರ್ನಾಟಕ ಸಂಘ ದುಬೈ ಕಾರ್ಯದರ್ಶಿ ದಯಾ ಕಿರೋಡಿಯನ್, ಬಸವ ಸಮಿತಿ ದುಬೈ ಮಾಜಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ, ಕನ್ನಡ ಪಾಠಶಾಲೆ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಂಘ ಶಾರ್ಜಾದ ಪ್ರಧಾನ ಕಾರ್ಯದರ್ಶಿ ನೋಯೆಲ್ ಅಲ್ಮೇಡಾ, ಭಟ್ಕಳ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಬರ್ಮಾವರ್, ಸಯ್ಯದ್ ಅಫ್ಜಲ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಿರಾಜ್ ಪರ್ಲಡ್ಕ, ಉದ್ಯಮಿ ರೊನಾಲ್ಡ್ ಮಾರ್ಟಿಸ್, ಅಶ್ರಫ್ ಕೆ.ಎಂ, ತುಳು ಒಕ್ಕೂಟದ ಯಶವಂತ್ ಕರ್ಕೇರ ಹಾಗೂ ಮತ್ತಿತ್ತರರು ಕೈಜೋಡಿಸಿದ್ದಾರೆ.

ಇಂದು ರಾತ್ರಿ 10:10ಕ್ಕೆ ಮಂಗಳೂರಿಗೆ..

ದುಬಾಯಿಯಿಂದ ಇಂದು ಸಂಜೆ ಹೊರಟ ವಿಮಾನ ಇಂದು ರಾತ್ರಿ ಸುಮಾರು 10:10 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬಾಯಿಯಿಂದ ಭಾರತೀಯರನ್ನು ಕರೆದುಕೊಂಡು ವಿಮಾನ ಬರಲಿದೆ.

ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ.

ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ಯು.ಎ.ಇ ನಿಂದ ಮಂಗಳೂರಿಗೆ ವಿಮಾನದಲ್ಲಿ 95 ಮಂದಿ ಪುರುಷರು, 38ಮಂದಿ ಗರ್ಭಿಣಿಯರು ಸೇರಿ ಮಹಿಳೆಯರು 81, ಒಟ್ಟು 176 ಪ್ರಯಾಣಿಕರು ಆಗಮಿಸಲಿದ್ದಾರೆ. 17 ಹೋಟೆಲ್‍ಗಳು ಹಾಗೂ 12 ಹಾಸ್ಟೆಲ್ ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ನೇಮಿಸಿರುವ ಅಧಿಕಾರಿಯು ಪ್ರಯಾಣಿಕರಿಂದ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯಲಿರುವರು ಎಂದು ಐ.ಎ.ಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧ :

ವಿದೇಶದಲ್ಲಿರುವ ಭಾರತೀಯರು ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಕಳಿಸಲು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಅಲ್ಲದೇ, ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.