ಕುಂದಾಪುರ: ಕರೋನಾ ವೈರಸ್‌ನಿಂದ ಭಾರತ ದೇಶವೊಂದೇ ಅಲ್ಲದೆ, ಇಡೀ ಪ್ರಪಂಚ ತತ್ತರಿಸಿದ್ದು, ಔಷಧ ಸಿದ್ದಪಡಿಸುವ ಸಂಶೋಧನೆಗಳು ನಡೆಯುತ್ತಿದ್ದರೂ ಫಲ ಸಿಕ್ಕಿಲ್ಲ. ಔಷಧವಿಲ್ಲದೆ ರೋಗ ನಿರೋಧಕ ಶಕ್ತಿ ಕುಂದಿಸುವ ಕರೋನಾ ವೈರಸ್‌ಗೆ ಮನೆಯಲ್ಲಿ ಉಳಿಯುವುದೇ ಮದ್ದಾಗಿದ್ದು, ಸರ್ಕಾರ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ, ನಮ್ಮ ನಮ್ಮ ಕುಟುಂಬವಲ್ಲದೆ ಸಾಮಾಜಿಕ ಆರೋಗ್ಯ ಕೂಡಾ ಕಾಪಾಡಿದಂತೆ ಆಗುತ್ತದೆ ಎಂದು ಕುಂದಾಪುರ ತರಹಸೀಲ್ದಾರ್ ತಿಪ್ಪೇಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಕಟ್ ಬೆಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದಲ್ಲಿ ಮಂಗಳವಾರ ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ನೇತೃತ್ವಲ್ಲಿ ವಿವಿಧ ಉದ್ಯಮಿಗಳ ಸಹಕಾರದಲ್ಲಿ ಐನೂರು ಕುಟುಂಬಕ್ಕೆ ಪಡಿತರ ಕಿಟ್ ವಿತರಣೆ ಕಾರ್‍ಯಕ್ರಮದಲ್ಲಿ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.

ಲಾಕ್‌ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಇನ್ನಿತರ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತೆ ಆಗಿದ್ದು, ಜೀವನ ನಿರ್ವಹಣೆಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕು ಆಡಳಿತ ಸ್ವಯಂಸೇವಾ ಸಂಸ್ಥೆಗಳು, ದಾನಿಗಳು ಹಾಗೂ ಉದ್ಯಮಿಗಳ ಸಹಕಾರದಲ್ಲಿ ನೆರವು ವಿತರಣೆ ಮಾಡಲಾಗುತ್ತದೆ. ದೇವಲ್ಕುಂದ ಗ್ರಾಮದ ಐನೂರು ಕುಟುಂಬಕ್ಕೆ ಅವಶ್ಯ ವಸ್ತುಗಳ ವಿತರಣೆ ಮಾಡುತ್ತಿದ್ದು, ಇದಕ್ಕೆ ಸಾಹಕಾರ ನೀಡಿ, ಜನರ ಕಷ್ಟಕ್ಕೆ ಒದಗುವ ಜನರ ಸಹಕಾರ ಶ್ಲಾಘನೀಯ ಎಂದರು.
ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸಂಜೀವಿನಿ ಪೈಪ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಮೊಹಮ್ಮದ್ ಆಲಿ, ವಿವಿ ಆಗ್ರೋ ಪ್ರಾಡಕ್ಟ್ಸ್ ಮಾಲೀಕ ವೆಂಕಟೇಶ್, ಎನ್‌ಟಿಎಸ್ ಸಾಗರ್ ಪ್ಯಾಲೇಸ್ ಆಡಳಿತ ಪಾಲುದಾರರಾದ ರಾಜು ಪೂಜಾರಿ, ತಿಮ್ಮಪ್ಪ ಪೂಜಾರಿ, ದೇವಲ್ಕುಂದ ಗ್ರಾಪಂ ಸದಸ್ಯರಾದ ಲತಾ ಡಿಸೋಜಾ, ಸಹನಾ, ಚಂದ್ರ ಮೊಗವೀರ, ದೇವಲ್ಕುಂದ ಗ್ರಾಪಂ ಗ್ರಾಮಲೆಕ್ಕಿಗ ಸೋಮಣ್ಣ ಇದ್ದರು.
ಶಿಕ್ಷಕರಾದ ಚಂದ್ರ ಡಿ. ಕಾರ್ಯಕ್ರಮ ಸ್ವಾಗತಿಸಿದರು. ಸುಕುಮಾರ ಶೆಟ್ಟಿ ವಂದಿಸಿದರು.
ಕರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಕೂಲಿ ಕಾರ್ಮಿಕರು ಕೃಷಿ ಕಾರ್ಮಿಕರಿಗೆ ದುಡಿಮೆಯಿಲ್ಲದೆ, ನಿತ್ಯದ ಬದುಕು ಕಷ್ಟವಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೇವಲ್ಕುಂದ ಗ್ರಾಪಂ ಸ್ಥಳೀಯ ದಾನಿಗಳ, ಉದ್ಯಮಿಗಳು ಸಂಪರ್ಕ ಮಾಡಿದ್ದು, ಅವರೆಲ್ಲರೂ ಸ್ಪಂದಿಸಿದ್ದರಿಂದ ಐನೂರು ಬಡಕುಟುಂಬಕ್ಕೆ ಪಡಿತರ ಕಿಟ್ ವಿತರಣೆ ಮಾಡುವ ಮೂಲಕ ಬಡವರ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮೂರಿನ ಬಡವರ, ಕಾರ್ಮಿಕರ ಗುರುತಿಸಿ ಆಹಾರ ಕಿಟ್ ವಿತರಿಸುವ ಕೆಲಸ ಮಾಡಬೇಕು.
– ಶರತ್ ಕುಮಾರ್ ಶೆಟ್ಟಿ, ಅಧ್ಯಕ್ಷ, ಎಪಿಎಂಸಿ ಕುಂದಾಪುರ.
Comments are closed.