ಕರಾವಳಿ

ಇಂದಿನಿಂದ ಮಣಿಪಾಲ ಕೆಎಂಸಿ ಬಂದ್ – ಒಪಿಡಿ ಸೇವೆ ಸ್ಥಗಿತ

Pinterest LinkedIn Tumblr


ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಗೆ ಶಿಫ್ಟ್ ಮಾಡಲಾಗಿದೆ. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಸೋಂಕಿತನನ್ನು ಕೆಎಂಸಿಗೆ ರವಾನಿಸಿದ್ದು, ಕೆಎಂಸಿ ತನ್ನ ಎಲ್ಲಾ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ.

ತುರ್ತು ಚಿಕಿತ್ಸೆ ಮಾತ್ರ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ. ಕಿಮೋಥೆರಪಿ ಮತ್ತು ರೇಡಿಯೋ ತೆರಪಿ ಮಾಡಿಸಿಕೊಳ್ಳುವ ರೋಗಿಗಳು ಕೆಎಂಸಿಗೆ ಯಾವುದೇ ಕಾರಣಕ್ಕೆ ಕಾಲಿಡಬಾರದು. ಅವರು ನೇರವಾಗಿ ಶಿರಡಿ ಸಾಯಿಬಾಬಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಎಮರ್ಜೆನ್ಸಿ ಮತ್ತು ಒಪಿಡಿ ಕಟ್ಟಡದ ಬಳಿ ಸುಳಿದಾಡುತ್ತಿಲ್ಲ, ಅವರು ನೇರವಾಗಿ ಮಹಿಳಾ ಮತ್ತು ಮಕ್ಕಳ ಘಟಕಕ್ಕೆ ತೆರಳಬೇಕು ಎಂದು ಹೇಳಿದರು.

ಯಾವುದೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯನ್ನು ಪ್ರವೇಶ ಮಾಡುವವರು ಹೊರಭಾಗದಲ್ಲಿ ಸಂಪೂರ್ಣ ತಪಾಸಣೆಗೆ ಒಳಗಾಗಬೇಕು. ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಅಂತಹ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಯ ಒಳಗೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಟ್ಟುಕೊಳ್ಳುವುದಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ ಕೊಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯಿಂದ ರೋಗಿಗಳು ಕೆಎಂಸಿಗೆ ಬರುತ್ತಾರೆ. ಪ್ರತಿನಿತ್ಯ ಸುಮಾರು 500ರಿಂದ 600 ಮಂದಿ ರೋಗಿಗಳು ಬರುತ್ತಾರೆ. ಸೋಂಕಿತ ವ್ಯಕ್ತಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಒಪಿಡಿ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Comments are closed.