ರಾಷ್ಟ್ರೀಯ

ಭಾರತದಲ್ಲಿ ಕೋವಿಡ್ 19 ಸಮುದಾಯ ಹಂತ ತಲುಪಿರುವುದಕ್ಕೆ ಬಲವಾದ ಪ್ರಕರಣ ಸಿಕ್ಕಿಲ್ಲ: ಕೇಂದ್ರ

Pinterest LinkedIn Tumblr


ನವದೆಹಲಿ:ಕೋವಿಡ್ 19 ಸೋಂಕು ಭಾರತದಲ್ಲಿ ಸಮುದಾಯ ಹಂತವನ್ನು ತಲುಪಿರುವುದಕ್ಕೆ ಯಾವುದೇ ಬಲವಾದ ಪ್ರಕರಣಗಳು ಸಿಕ್ಕಿಲ್ಲ. ಅಲ್ಲದೇ ದೇಶದಲ್ಲಿ ಈ ಸೋಂಕು ಹರಡುವ ಪ್ರಮಾಣದ ಅಂಶ ಸಹಜ ಸ್ಥಿತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಕೋವಿಡ್ 19ಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ನಿಯಮಾನುಸಾರ ಪತ್ರಿಕಾಗೋಷ್ಠಿಯಲ್ಲಿ ನೀಡುವ ಮಾಹಿತಿ ಪ್ರಕಾರ ಅಧಿಕೃತವಾಗಿ ದೇಶದಲ್ಲಿ ಕೋವಿಡ್ 19ಗೆ ಸಾವನ್ನಪ್ಪಿದವರ ಸಂಖ್ಯೆ 13 ಹಾಗೂ ಈವರೆಗೆ ಸೋಂಕು ಪೀಡಿತರ ಸಂಖ್ಯೆ 649ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಇದು ದೇಶದಲ್ಲಿನ ಆರಂಭಿಕ ಹಂತದ ಅಂಕಿಅಂಶವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕೋವಿಡ್ 19 ಪ್ರಕರಣಗಳು ಹೆಚ್ಚಾಗಿವೆ, ಆದರೆ ಅದರ ಪ್ರಮಾಣ ಮಾತ್ರ ಸಹಜ ಸ್ಥಿತಿಯಲ್ಲಿದೆ. ಆದರೆ ಇದು ಆರಂಭಿಕ ಮಾಹಿತಿ ಮಾತ್ರ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದರು.

ಭಾರತದಲ್ಲಿ ಕೋವಿಡ್ 19 ಸೋಂಕು ಸಮುದಾಯದ ಹಂತ ತಲುಪಿದೆ ಎಂಬುದಕ್ಕೆ ಯಾವುದೇ ಬಲವಾದ ಪ್ರಕರಣ ಸಿಕ್ಕಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಕಳೆದ 24ಗಂಟೆಯಲ್ಲಿ ನಾಲ್ಕು ಸಾವಿನ ಪ್ರಕರಣ ಹಾಗೂ 42 ಹೊಸ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

Comments are closed.