ಕರಾವಳಿ

ಠಾಣೆಗೆ ಕರೆತರುವ ವೇಳೆ ಪೊಲೀಸ್’ಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಠಾಣೆಗೆ ಕರೆತರುತ್ತಿದ್ದ ವೇಳೆ ಪೊಲೀಸ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ 394 ಐ.ಪಿ.ಸಿ ಪ್ರಕರಣದಲ್ಲಿ ಸಂಶಯಾಸ್ಪದದ ಮೇಲೆ ತನಿಖಾಧಿಕಾರಿ ರವಿಕುಮಾರ್, ಆರೋಪಿ ಕಿರಣ್‍ನನ್ನು 2015, ಮೇ 7 ರಂದು ಠಾಣೆಗೆ ಕರೆತರುವಂತೆ ಸಿಬ್ಬಂದಿಗಳಾದ ಇಮ್ರಾನ್ ಮತ್ತು ಲೋಕೇಶ್ ಇವರನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಿದ್ದರು. ಸಿಬ್ಬಂದಿಯವರು ಆರೋಪಿತನನ್ನು ಸಂತೆಕಟ್ಟೆಯ ಪೆಟ್ರೋಲ್ ಬಂಕ್ ಸಮೀಪ ಪತ್ತೆ ಮಾಡಿ ಸಿಬ್ಬಂದಿಯಾದ ಇಮ್ರಾನ್ ಆರೋಪಿಗೆ ತನಿಖಾಧಿಕಾರಿಯವ ಆದೇಶದಂತೆ ವಿಚಾರಣೆಗೆ ಹಾಜರಾಗಲು ತಮ್ಮೊಂದಿಗೆ ಬರುವಂತೆ ತಿಳಿಸಿ ಆರೋಪಿಯನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಮಲ್ಪೆ ಠಾಣೆಗೆ ಸಂತೆಕಟ್ಟೆ ಮೂಲಕ ನೇಜಾರಿನ ಜ್ಯೋತಿ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಕರೆದುಕೊಂಡು ಬರುತ್ತಿರುವಾಗ ಆರೋಪಿಯು ಇಮ್ರಾನ್‍ರಿಗೆ ಜನರು ಇಲ್ಲದ ಸ್ಥಳವನ್ನು ನೋಡಿ ಬೈಕ್ ಸ್ಲೋ ಮಾಡುವಂತೆ ತಿಳಿಸಿದ್ದು, ಇಮ್ರಾನ್‍ರವರು ಬೈಕನ್ನು ಸ್ಲೋ ಮಾಡಿದಾಗ ಆರೋಪಿ ಕಿರಣ್ ಬೈಕಿನಿಂದ ಕೆಳಗೆ ಹಾರಿ ಓಡಲಾರಂಬಿಸುತ್ತಾನೆ. ಆ ಸಮಯ ಇಮ್ರಾನ್ ಬೈಕನ್ನು ನಿಲ್ಲಿಸಿ ಆರೋಪಿಯನ್ನು ಹಿಡಿಯಲು ಹೋದಾಗ ಆರೋಪಿ ಇಮ್ರಾನ್ ಮೇಲೆ ದೈಹಿಕ ಹಲ್ಲೆ ಮಾಡಿ ತಪ್ಪಿಸಿಕೊಂಡು ಓಡಿ ಹೋಗಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಮಲ್ಪೆ ಆಗಿನ ಪೊಲೀಸ್ ಉಪನಿರೀಕ್ಷಕ ರವಿ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಎಮ್.ಎನ್.ಮಂಜುನಾಥ್ ಆರೋಪಿ ಕಿರಣ್‍ಗೆ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.