ಕರಾವಳಿ

ಕೊರೊನಾ ಸೋಂಕು ಭಯ ಬೇಡ, ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ – ಡಿಹೆಚ್‍ಒ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕೊರೊನ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಅನವಶ್ಯಕ ವದಂತಿಗಳಿಗೆ ಯಾವುದೇ ಭಯಪಡಬೇಕಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ, ಎಲ್ಲಾ ಸಮುದಾಯ ಅರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ಫಿಜಿಷಿಯನ್, ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರುಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ, ತಾಲೂಕು ಕೇಂದ್ರಗಳಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅಧೀನ ವೈದ್ಯಾಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆ ನೀಡಲಾಗಿದೆ ಎಂದರು.

ಉಡುಪಿಯಲ್ಲಿ ಶಂಕಿತ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ದಾಖಲು ಮಾಡಲು ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ ಮತ್ತು ವೆಂಟಿಲೇಟರ್ ಸಹಿತ 2 ಐಸಿಯುಗಳ ವ್ಯವಸ್ಥೆ ಮಾಡಿದ್ದು, ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಲ್ಲಿ ಶಂಕಿತ ರೋಗಿಗಳ ಥ್ರೋಟ್ ಸ್ವಾಬ್ ಗಳ ಮಾದರಿ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಸಾಗಾಣಿಕೆಗೆ ವ್ಯವಸ್ಥೆ ಮಾಡಿದೆ, ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೆಂದ್ರ ಮತ್ತು ಸಮುದಾಯ ಆರೋಗ್ಯ ಕೆಂದ್ರ ಮಟ್ಟದಲ್ಲಿ ತುರ್ತು ಕಾರ್ಯಪಡೆ ರಚಿಸಲಾಗಿದ್ದು, ಸದಾ ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದು, ಪ್ರತಿದಿನದ ಚಟುವಟಿಕೆಗಳ ವರದಿ ಪಡೆಯಲಾಗುತ್ತಿದೆ ಎಂದರು.

ಕೊರೊನಾ ರೋಗ ಲಕ್ಷಣಗಳ ಕುರಿತು ಜಿಲ್ಲೆಯಲ್ಲಿ ವ್ಯಾಪಕವಾಗಿ ಆರೋಗ್ಯ ಶಿಕ್ಷಣ ಏರ್ಪಡಿಸಲು ಕ್ರಮ ಕೈಗೊಂಡಿದ್ದು, ಉಡುಪಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಲ್ಪೆ, ಕೊಲ್ಲೂರು ಮುಂತಾದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಕೆಗೆ ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರ ಪತ್ರಗಳನ್ನು ಹಂಚಲು ಕ್ರಮವಹಿಸಲಾಗಿದೆ ಎಂದು ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದರು.

ಹೊರರಾಜ್ಯ ಮತ್ತು ಹೊರದೇಶದಿಂದ ಬರುವವರ ಮೇಲೆ ನಿಗಾ ವಹಿಸಲು ಮತ್ತು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಿದ್ದು, ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಕುರಿತಂತೆ ಮಾಹೆ ವಿವಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆ.ಎಂ.ಸಿ.ಯಲ್ಲಿ ಸಹ ಶಂಕಿತ ರೋಗಿಗಳನ್ನು ದಾಖಲಿಸಲು 9 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿದ್ದು, ಮತ್ತು ಎನ್-95 ಮಾಸ್ಕ್ ಸೇರಿದಂತೆ ಎಲ್ಲಾ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇದೆ ಎಂದು ತಿಳಿಸಿದರು.

ಕೊರೊನಾ ವೈರಸ್ ಕುರಿತಂತೆ ಸಾರ್ವಜನಿಕರು ಯಾವುದೇ ಭಯ ಪಡದಂತೆ ತಿಳಿಸಿದ ಡಾ. ಸುಧೀರ್ ಚಂದ್ರ ಸೂಡಾ, ಯಾವುದೇ ಸಮಸ್ಯೆಗಳಿದ್ದಲ್ಲಿ ಉಚಿತ ಹೆಲ್ಪ್‍ಲೈನ್ ಸಂಖ್ಯೆ 104 ಅಥವಾ 080-2228541/ 22374658 ಅಥವಾ ಉಡುಪಿ ಜಿಲ್ಲಾ ಸರ್ವೆಕ್ಷಣಾ ಘಟಕ ದೂ.ಸಂ. 0820-2525561 ನ್ನು ಸಂರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

Comments are closed.