ಕರಾವಳಿ

ಕುಂದಾಪುರ: ಬೋಟ್‌ ಮುಳುಗಡೆ- 6 ಮಂದಿ ಮೀನುಗಾರರ ರಕ್ಷಣೆ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ 30 ನಾಟಿಕಲ್‌ ಮೈಲು ದೂರದಲ್ಲಿ ಮಲ್ಪೆ ನೋಂದಾಯಿತ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಮತ್ತೂಂದು ಬೋಟಿನ ಸಹಾಯದಿಂದ ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಮೀನುಗಾರರಾದ ಬೋಟಿನ ಚಾಲಕ ವೆಂಕಟೇಶ ಹರಿಕಾಂತ, ನಂದೀಶ್‌ ಖಾರ್ವಿ, ಸಂತೋಷ, ಹುಲಿಯಪ್ಪ, ದುರ್ಗಪ್ಪ ಹರಿಕಾಂತ ಹಾಗೂ ಅಣ್ಣಪ್ಪ ಹರಿಕಾಂತ ಎನ್ನುವರನ್ನು ರಕ್ಷಿಸಲಾಗಿದೆ.

ಜ.12 ರಂದು ರಾತ್ರಿ 10.30 ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್ ಜ.14 ರಂದು ಗಂಗೊಳ್ಳಿಯಿಂದ ಸುಮಾರು 30 ನಾಟಿಕಲ್‌ ಮೈಲ್‌ ದೂರದಲ್ಲಿದ್ದಾಗ ಬೋಟಿನ ಹಿಂದಿನ ಹಲಗೆ ತುಂಡಾಗಿ, ಬೋಟಿನೊಳಗೆ ನೀರು ಹೋಗಿದೆ. ಇದನ್ನು ತಿಳಿದ ಚಾಲಕ ವೆಂಕಟೇಶ್‌ ತತ್‌ಕ್ಷಣ ವೈಯರ್‌ಲೆಸ್‌ ಫೋನ್‌ ಮೂಲಕ ಹತ್ತಿರದ ಬೋಟಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಅಲ್ಲೇ ಸಮೀಪದಲ್ಲಿದ್ದ ಸಾಯಿರಾಮ್‌ ಎನ್ನುವ ಬೋಟಿನವರು ಇದರಲ್ಲಿದ್ದ ಎಲ್ಲ 6 ಮಂದಿ ಮೀನುಗಾರರನ್ನು ಪಾರು ಮಾಡಿದ್ದಾರೆ.

ಈ ಸಂಬಂಧ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಎಸ್‌ಐ ಸಂದೀಪ್‌ ಜಿ.ಎಸ್‌., ಎಎಸ್‌ಐ ಭಾಸ್ಕರ, ಸಿಬಂದಿಯಾದ ಸುರೇಂದ್ರ, ಮತ್ತಿತರರು ಮಾಹಿತಿ ಪಡೆದುಕೊಂಡಿದ್ದಾರೆ.

10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಕೂಡ ಬೋಟ್‌ ಭಾಗಶಃ ಮುಳುಗಡೆಯಾಗಿದ್ದು, ಇದನ್ನು ಮೇಲೆಕ್ಕೆತ್ತುವ ಹಿನ್ನೆಲೆ ಮೀನುಗಾರರು ಪರಿಶೀಲನೆ ನಡೆಸಿದ್ದಾರೆ.

Comments are closed.