ಕುಂದಾಪುರ: ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ನಾಳಿಕೇರ ಮಹಾಗಣಪತಿಯಾಗ ಇಂದು (ನ.30 ಶನಿವಾರ) ಸಂಭ್ರಮ ಹಾಗೂ ಸಡಗರದಿಂದ ಜರುಗಿತು.
ದೇವಸ್ಥಾನದಲ್ಲಿನ ಹಬ್ಬದ ಪೂರ್ವಭಾವಿಯಾಗಿ ಮೂರ್ನಾಲ್ಕು ದಿನಗಳಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆದವು. ಕಟ್ಟೆ ಪೂಜೆಯ ಅಂಗವಾಗಿ ಗುರುವಾರ ಹಾಗೂ ಶುಕ್ರವಾರ ದೇವಸ್ಥಾನದ ಸಮೀಪದ ವಕ್ವಾಡಿ ಗ್ರಾಮ ಹಾಗೂ ತೆಕ್ಕಟ್ಟೆ ಹಾಗೂ ಕುಂಭಾಶಿಗೆ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವ ಕಟ್ಟೆ ಓಲಗ ಕಾರ್ಯಕ್ರಮವೂ ವಿಧಿವತ್ತಾಗಿ ಜರುಗಿತು.

ರಥೋತ್ಸವ ದಿನವಾದ ಶನಿವಾರ ಬೆಳಿಗ್ಗಿನಿಂದಲೇ ಸಹಸ್ರ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮದ್ಯಾಹ್ನದ ಸುಮಾರಿಗೆ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಘೊಂಡು ರಥೋತ್ಸವ ವೀಕ್ಷಿಸಿ, ಹಣ್ಣುಕಾಯಿ ಮೊದಲಾದ ಸೇವೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತರಿಗೂ ಪಾನಕ ಸೇವೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಥೋತ್ಸವದ ಸಂದರ್ಭ ಕೀಲುಕುದುರೆ, ತಟ್ಟಿರಾಯ, ನಾದಸ್ವರ, ವಾದ್ಯಗೋಷಗಳು, ಚಂಡೆ ವಾದನಗಳು ಜನರನ್ನು ಇನ್ನಷ್ಟು ಆಕರ್ಷಿಸಿದವು.
ಈ ಸಂದರ್ಭ ಆನೆಗುಡ್ಡೆ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿಗಳು, ಅನುವಂಶಿಕ ಪರ್ಯಾಯ ಅರ್ಚಕ ವೃಂದದವರು ಉಪಸ್ಥಿತರಿದ್ರು.

ಸಿ.ಸಿ. ಟಿವಿ ಕಣ್ಗಾವಲು….
ಇನ್ನು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದ ನೀಡಬಾರದೆಂಬ ನಿಟ್ಟಿನಲ್ಲಿ ಕುಂದಾಪುರ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದು ಮಾತ್ರವಲ್ಲದೇ ದೇವಸ್ಥಾನಕ್ಕೆ ಸಂಬಂಧಿಸಿದ ೧೦ ಸಿಸಿ ಟಿವಿ ಹಾಗೂ ಪ್ರತ್ಯೇಕ ೮ ಸಿಸಿ ಟಿವಿಗಳನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಿ ಅದನ್ನು ಇಡೀ ದಿನ ಲೈವ್ ವೀಕ್ಷಿಸುವ ತಂಡ ರಚಿಸಿದ್ದರು. ಸಿಪಿಐ ಮಂಜಪ್ಪ ಡಿ.ಆರ್., ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್., ಕ್ರೈಮ್ ಪಿಎಸ್ಐ ರಮೇಶ್ ಪವಾರ್, ಟ್ರಾಫಿಕ್ ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.