ಕರಾವಳಿ

ಆರ್.ಟಿ.ಓ ಕಚೇರಿದಿಂದ ಬ್ರೋಕರ್’ಗಳನ್ನು ದೂರವಿಡಿ: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ

Pinterest LinkedIn Tumblr

ಉಡುಪಿ: ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ದೊರೆತಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮಾತನಾಡಿದರು.

ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರ ಪಟ್ಟಿ ಪಡೆದು, ಲೋಕಾಯುಕ್ತ ಇನ್ಸ್ಪೆಕ್ಟರ್ಗಳು ಖುದ್ದಾಗಿ ಸಂತ್ರಸ್ತರ ಮನೆಗೆ ಭೇಟಿ ನೀಡಿ, ಪರಿಹಾರ ಮೊತ್ತ ದೊರಕಿರುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗುವಂತೆ ಗಮನ ಹರಿಸಬೇಕು. ಹಲವೆಡೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಅನರ್ಹರಿಗೂ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಲು ಪಿ.ಡಿ.ಓ ಗಳ ಮೇಲೆ ಒತ್ತಡ ಹೇರಿರುವ ಬಗ್ಗೆ ದೂರುಗಳು ಬಂದಿವೆ. ಅಮೇರಿಕಾ ದೇಶದಲ್ಲಿ ಉದ್ಯೋಗದಲ್ಲಿರುವವರಿಗೂ ವಸತಿ ಯೋಜನೆಯ ಮನೆ ಮಂಜೂರಾಗಿರುವ ಪ್ರಕರಣಗಳು ಇವೆ. ಈ ನಿಟ್ಟಿನಲ್ಲಿ ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇರಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದರು.

ಆರ್.ಟಿ.ಓ – ಮಧ್ಯವರ್ತಿಗಳನ್ನು ದೂರವಿಡಿ: ಆರ್.ಟಿ.ಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತಿದೆ ಎಂದು ವ್ಯಾಪಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಬ್ರೋಕರ್ಗಳನ್ನು ಆರ್.ಟಿ.ಓ ಕಚೇರಿಯಿಂದ ದೂರವಿಡಲು ಲೋಕಾಯುಕ್ತ ನ್ಯಾಯಮೂರ್ತಿಗಳು ಆರ್.ಟಿ.ಓ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೇ, ಪರ್ಮಿಟ್ ಪಡೆದಿರುವ ಖಾಸಗಿ ಬಸ್ಗಳು ನಿಗಧಿತ ಮಾರ್ಗದಲ್ಲಿ ಸಂಚರಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.

ಕೃಷಿ ಇಲಾಖೆಯ ಕೃಷಿ ಹೊಂಡ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಕೃಷಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ , ಎಎಸ್ಪಿ ಕುಮಾರ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

Comments are closed.