ಕರಾವಳಿ

‘ಕಾಂತ ರೈ ಅನ್ಯಾನ್ಯ ಕ್ಷೇತ್ರದ ಸಾಧಕರು’ : ವಿದ್ವಾನ್ ಕಾಂತ ರೈ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಪಿ.ರಮಾನಾಥ ಹೆಗ್ಡೆ

Pinterest LinkedIn Tumblr

ಮಂಗಳೂರು: ‘ ಮೂಡಬಿದಿರೆ ಜೈನ್ ಜೂನಿಯರ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ವಿದ್ವಾನ್ ಕುಳಾಲು ಕಾಂತ ರೈ ಅವರು ಶಿಕ್ಷಣ, ಸಾಹಿತ್ಯ,ಕೃಷಿ, ಯಕ್ಷಗಾನ ಹೀಗೆ ಅನ್ಯಾನ್ಯ ಕ್ಷೇತ್ರದ ಸಾಧಕರಾಗಿ ಪ್ರಸಿದ್ಧರು. ತಾಳಮದ್ದಳೆ ಕ್ಷೇತ್ರದ ಹಳೆತಲೆಮಾರಿನ ಅರ್ಥಧಾರಿಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು ‘ ಎಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗಡೆ ಹೇಳಿದರು.

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ಮೂರನೇ ದಿನ ಹಿರಿಯ ಅರ್ಥಧಾರಿ ಮತ್ತು ವಿದ್ವಾಂಸ ದಿ.ಕೆ.ಕಾಂತ ರೈ ಮೂಡುಬಿದಿರೆ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಅವರು ಮಾತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ , ಸಾಹಿತಿ – ನಾಟಕಕಾರ ಅತ್ತಾವರ ಶಿವಾನಂದ ಕರ್ಕೇರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ‘ಬಯಲಾಟದ ಮೇಳಗಳು ತುಳು ಭಾಷೆಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡುವುದರ ಮೂಲಕ ಕರಾವಳಿಯ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದರು. ಕುಳಾಲು ಮನೆತನದ ಹಿರಿಯರಾದ ಪ್ರೊ.ಜಿ. ಆರ್. ರೈ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ , ಉದ್ಯಮಿ ಶ್ರೀನಾಥ್ ಕೊಂಡೆ ಚಕ್ರಕೋಡಿ, ಕೆ.ಗಣೇಶ್ ರೈ ಹೊಸಂಗಡಿ, ವಿಶಾಲಕೀರ್ತಿ ರೈ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.ಮಹಿಳಾವಿಭಾಗದ ಶೋಭಾ ಕೇಶವ ಕಣ್ಣೂರು ವಂದಿಸಿದರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿಕಟಪೂರ್ವ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಪದಾಧಿಕಾರಿಗಳಾದ ಅಶೋಕ್ ಮಾಡ ಕುದ್ರಾಡಿಗುತ್ತು, ಕರುಣಾಕರ ಶೆಟ್ಟಿ ಪಣಿಯೂರು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ್ ಆಚಾರ್ಯ ಗೇರುಕಟ್ಟೆ ಸಿದ್ದಾರ್ಥ ಅಜ್ರಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.

‘ಸಂಧಾನ ಸಪ್ತಕ’ ಸರಣಿಯ ಅಂಗವಾಗಿ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ ಜರಗಿತು.

Comments are closed.