ಕರಾವಳಿ

ಜಿಲ್ಲೆಯ ಎಲ್ಲಾ ಬೀಚ್’ಗಳಿಗೂ ಬ್ಲೂ ಫ್ಲಾಗ್ ಮಾನ್ಯತೆ ಪಡೆಯಲು ಪ್ರಯತ್ನಿಸಿ- ಜಿಲ್ಲಾಧಿಕಾರಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿನ ಎಲ್ಲಾ ಬೀಚ್ಗಳಿಗೂ ಬ್ಲೂ ಫ್ಲಾಗ್ ಮಾನ್ಯತೆ ದೊರೆಯುವ ರೀತಿಯಲ್ಲಿ ಬೀಚ್ಗಳನ್ನು ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮವನ್ನು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಬ್ಲೂ ಫ್ಲಾಗ್ ಪಡೆದಿರುವ ಬೀಚ್ಗಳಲ್ಲಿನ ಸೌಲಭ್ಯಗಳನ್ನು ಗುರುತಿಸಿ, ಇತರೆ ಬೀಚ್ಗಳಲ್ಲಿ ಸಹ ಆ ಸೌಲಭ್ಯಗಳನ್ನು ಅಳವಡಿಸಿ, ಜಿಲ್ಲೆಯ ಎಲ್ಲಾ ಬೀಚ್ಗಳೂ ಹಂತ ಹಂತವಾಗಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಕರಾಗುವಂತೆ ಸೂಚಿಸಿದ ಡಿಸಿ, ಬ್ಲೂ ಫ್ಲಾಗ್ ಪಡೆದಿರುವ ಬೀಚ್ನಲ್ಲಿರುವ ಸೌಲಭ್ಯಗಳು ಮತ್ತು ಪಡೆಯದೆ ಇರುವ ಬೀಚ್ಗಳಲ್ಲಿರುವ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಗೈಡ್ಲೈನ್ಸ್ಗಳಲ್ಲಿನ ಕೊರತೆಗಳ ಕುರಿತು ಕಾಲೇಜು ವಿದ್ಯಾರ್ಥಿಗಳ ಮೂಲಕ ಸರ್ವೆ ನೆಡೆಸುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.

ಬ್ಲೂ ಫ್ಲಾಗ್ ಸರ್ಟಿಫಿಕೇಷನ್ ಪಡೆದಿರುವ ಬೀಚ್ಗೆ ಸಂಬಂಧಿಸಿದಂತೆ ಮಾಸ್ಟರ್ ಪ್ಲ್ಯಾನ್ ತಯಾರಿಸಿ ಸಿ.ಝಡ್.ಎಮ್.ಎ ಮ್ಯಾಪ್ನೊಂದಿಗೆ ಸಿ.ಆರ್.ಝಡ್ ಕ್ಲಿಯರೆನ್ಸ್ ಸಲ್ಲಿಸುವ ಕುರಿತಂತೆ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲಿ ಸಲ್ಲಿಸಿ, ಈ ಬಗ್ಗೆ ನವೆಂಬರ್ ಅಂತ್ಯದಲ್ಲಿ ಸಭೆ ನಡೆಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಮಲ್ಪೆ ಸೀ ವಾಕ್ ಪ್ರದೇಶದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ತಯಾರಿಸಿರುವ ಅಂದಾಜು ಪಟ್ಟಿಯಲ್ಲಿನ ಕಾಮಗಾರಿಗಳನ್ನು ಮಲ್ಪೆ ಅಭಿವೃದ್ದಿ ಸಮಿತಿ ಮೂಲಕ ಕೈಗೊಳ್ಳುವಂತೆ ಮತ್ತು ಸಮೀಪದಲ್ಲಿರುವ ಬಂದರು ಇಲಾಖೆಯ ಜಾಗವನ್ನು ಲೀಸ್ ಮೇಲೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಲ್ಪೆ ಬೀಚ್ನಲ್ಲಿ ಪ್ರವಾಸಿ ಬೋಟ್ಗಳಿಗೆ ಅನುಮತಿ ಪಡೆದವರು, ನಿಯಮ ಮೀರಿ ಪ್ರವಾಸಿಗರನ್ನು ಕರೆದೊಯ್ಯುವ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಈಗಾಗಲೇ ಒಂದು ಬೋಟ್ನವರಿಗೆ ನೋಟಿಸ್ ನೀಡಿದ್ದು, ಅವರಿಗೆ ನೀಡಲಾಗಿರುವ ಅನುಮತಿಯನ್ನು ರದ್ದುಪಡಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು, ಸಾರ್ವಜನಿಕರ ಸುರಕ್ಷತಾ ದೃಷ್ಠಿಯಿಂದ ರಚಿಸಿರುವ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಬೋಟ್ ಮಾಲೀಕರ ಜವಾಬ್ದಾರಿ ಎಂದು ಹೇಳಿದರು.  ಪಡುಬಿದ್ರಿ ಬೀಚ್ನ ನಿರ್ವಹಣೆಯ ಟೆಂಡರ್ ಅವಧಿ ಮುಗಿದಿದ್ದು, ಈ ವಿಚಾರವಾಗಿ ಮರು ಟೆಂಡರ್ ಕರೆಯುವಂತೆ ಡಿಸಿ ತಿಳಿಸಿದರು.

ಕುಂದಾಪುರ ತಾಲೂಕಿನ ಪಂಚಗಂಗಾವಳಿ ಸಂಪರ್ಕದ ಬಬ್ಬುಕುದ್ರು ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಛಿ ಪಡಿಸುವ ಕುರಿತು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಲ್ಲಿಸಿರುವ ಪ್ರಸ್ತಾವನೆ ಕುರಿತು, ಸ್ಥಳ ಪರಿಶೀಲನೆ ನಡೆಸಿ, ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಜಿಲ್ಲೆಯ ಕುಂಜಾರುಗಿರಿಯ ಶ್ರೀ ಮದ್ವಾಚಾರ್ಯ ಪ್ರತಿಮೆಯ ಬಳಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಪಡಿಸುವ ಬಗೆಗಿನ ಪ್ರಸ್ತಾವನೆಗೆ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಡಿಸಿ ತಿಳಿಸಿದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಚಾರ ದೊರಕಿಸಲು ಹೈವೇಗಳ ಎರಡೂ ಬದಿಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಂತಹ ಹೋರ್ಡಿಂಗ್ಸ್ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಬೇಕು. ಮತ್ತು ಬೈಪಾಸ್ ರಸ್ತೆಗಳಲ್ಲಿನ ಫ್ಲೈ ಓವರ್ಗಳ ಗೋಡೆಗಳ ಮೇಲೆ ಜಿಲ್ಲೆಯ ಪ್ರವಾಸಿ ತಾಣಗಳು, ದೇವಾಲಯಗಳು, ಕಲೆ-ಸಂಸ್ಕ್ರತಿಯನ್ನು ಅನಾವರಣಗೊಳಿಸುವ ಮತ್ತು ಇನ್ನಿತರ ಚಿತ್ರಗಳನ್ನು ಚಿತ್ರಿಸಬೇಕು. ಹಾಗೂ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಪ್ರಚಾರ ನೀಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಂತೆ ಹಾಗೂ ಇಲಾಖೆಯ ವೆಬ್ಸೈಟ್ನ್ನು ಇನ್ನಷ್ಟು ಆಕರ್ಷಕವಾಗಿ ಅಭಿವೃದ್ದಿ ಪಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರವಾಸಿ ಗೈಡ್ಗಳ ನೇಮಕ ಮಾಡುವ ನಿಟ್ಟಿನಲ್ಲಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಆಸಕ್ತ ಯುವಕರನ್ನು ಆರಿಸಿ ಅವರಿಗೆ ಸೂಕ್ತ ತರಬೇತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬೀಚ್ಗಳಲ್ಲಿ ಪ್ರತಿ ವಾರಾಂತ್ಯದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ತಿಳಿಸಿದ ಡಿಸಿ, ಈ ಬಗ್ಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯೊಂದಿಗೆ ಯೋಜನೆ ರೂಪಿಸುವಂತೆ ತಿಳಿಸಿದರು.

ಹೋಮ್ ಸ್ಟೇ ಸ್ವೀಕೃತ ಅರ್ಜಿಗಳಿಗೆ ಅನುಮತಿ ನೀಡುವ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ, ಈ ಹಿಂದೆ ಅನುಮತಿ ಪಡೆದಿರುವ 32 ಹೋಮ್ ಸ್ಟೇಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Comments are closed.