ಕರಾವಳಿ

ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಮರಳು ದರವಿರಲಿ: ಶಾಸಕ ಸುಕುಮಾರ್ ಶೆಟ್ಟಿ

Pinterest LinkedIn Tumblr

ಕುಂದಾಪುರ: ಕುಡಿಯುವ ನೀರು, ಅಂತರ್ಜಲಮಟ್ಟ ಏರಿಕೆ ದೃಷ್ಟಿಯಲ್ಲಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂಡಿ ಅಣೆಕಟ್ಟು ಗುರುತಿಸಿ ಹೂಳೆತ್ತುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಗ್ರಾಪಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕಳೆದ ವರ್ಷ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ೭೦ ಕೋಟಿ ರೂ.ಅನುದಾನ ತಂದಿದ್ದು, ಪ್ರಸಕ್ತ ೩೦೦ ಕೋಟಿ ಅನುದಾನ ತಂದಿದ್ದೇನೆ. ಅಭಿವೃದ್ದಿ ಕಾರ್ಯ ನಡೆಯಬೇಕಿದ್ದರೆ ಮರಳು ಪ್ರಮುಖವಾಗಿ ಬೇಕಾಗುತ್ತದೆ. ಹೀಗಾಗಿ ಅಂತರ್ಜಲಮಟ್ಟ ಹೆಚ್ಚಿಸಲು ಕಿಂಡಿ ಅಣೆಕಟ್ಟುಗಳಲ್ಲಿ ತೆಗೆದಿರುವ ಹೂಳು ಅಭಿವೃದ್ದಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಹೂಳೆತ್ತಲು ಪಂಚಾಯಿತಿ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿಗೆ ಉಪಯೋಗಿಸಬಹುದಾದ ಹೂಳು ಯಾರ್ಡ್‌ನಲ್ಲಿ ಸಂಗ್ರಹಿಸಿ ಅಲ್ಲಿಂದ ಕಡಿಮೆ ಬೆಲೆ ವಿತರಿಸಬೇಕು. ಪ್ರತೀ ಯೂನಿಟ್‌ಗೆ ಎರಡು ಸಾವಿರ ಬೆಲೆ ನಿಗಧಿಪಡಿಸಬೇಕು. ಈ ರೀತಿ ಮಾಡಿದರೆ ಬಡವರಿಗೂ ಮನೆ ಕಟ್ಟಿಕೊಳ್ಳಲು ಕಡಿಮೆ ಬೆಲೆಯಲ್ಲಿ ಮರಳು ಸಿಕ್ಕಂತಾಗುತ್ತದೆ. ಈ ಪ್ರಕ್ರಿಯೆ ಆದಷ್ಟು ಬೇಗ ಆಯಾ ಪಂಚಾಯಿತಿಗಳಲ್ಲಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.

ನಾಡ ಗ್ರಾಪಂ ಸೇರಿದಂತೆ ಹಲವೆಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ನಾನು ಸಹಿಸಲ್ಲ. ಯಾರ್‍ಯಾರಿಗೋ ತಿನ್ನಲು ನಾನು ಬಿಡೋದಿಲ್ಲ. ಈ ಕೆಲಸ ಮುಂದೆ ನಡೆಯಬಾರದು. ನಮ್ಮ ಉದ್ದೇಶ ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು ಎನ್ನುವುದು. ಎಲ್ಲೆಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆಯೋ ಮಾಹಿತಿ ಕಲೆ ಹಾಕಿ ಕೂಡಲೇ ಅದರ ವಿರುದ್ದ ಕ್ರಮಕೈಗೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಙಾನ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಬೈಂದೂರು ತಹಸೀಲ್ದಾರ್ ಬಸವರಾಜ್ ಪೂಜಾರ್, ಕುಂದಾಪುರ ತಾಲೂಕು ಪಂಚಾಯಿತಿ ಪ್ರಭಾರ ಇಒ ಡಾ. ನಾಗಭೂಷಣ್ ಉಡುಪ, ಬೈಂದೂರು ಇಓ ಭಾರತಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಸಹಾಯಕ ನಿದೇರ್ಶಕ ರಾಮ್ ಜಿ ನಾಯ್ಕ್ ಇದ್ದರು.

ನೆರೆಗೆ ಹೂಳು ಕಾರಣ
ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಹೂಳು ಮೇಲೆತ್ತದ ಕಾರಣ ಕಳೆದ ಬಾರಿ ಮಳೆಗಾಲದಲ್ಲಿ ಪಡುಕೋಣೆ, ಹಡವು, ಬಡಾಕೆರೆ ಮುಂತಾದ ಕಡೆಗಳಲ್ಲಿ ಕೃತಕ ನೆರೆ ಸೃಷ್ಠಿಯಾದ ಪರಿಣಾಮ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ೧೭೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದಲ್ಲದೇ ಸಾವು-ನೋವುಗಳು ಸಂಭವಿಸಿತ್ತು. ಆದ್ದರಿಂದ ಈ ಬಾರಿ ಮುನ್ನೆಚ್ಚರಿಕಾಕ್ರಮವಾಗಿ ಹೂಳು ಮೇಲೆತ್ತಬೇಕು. ಹೂಳನ್ನು ಮೇಲೆತ್ತುವುದರಿಂದ ಅನೇಕ ಉಪಯೋಗಗಳಿವೆ. ಕೃತಕ ನೆರೆ ಸೃಷ್ಠಿಯಾಗುವುದನ್ನು ತಡೆಯಲು ಹಾಗೂ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ಮತ್ತೆ ಮೇಲೆತ್ತಿದ ಹೂಳು ಕಟ್ಟಡಗಳ ಕಾಮಗಾರಿಗೆ ಯೋಗ್ಯವಾಗಿದ್ದಲ್ಲಿ ಅದನ್ನು ಟೆಂಡರ್ ಕರೆಯುವುದುರ ಮೂಲಕ ಉಪಯೋಗಿಸಿಕೊಳ್ಳಬಹುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕ .

ಸ್ಮಶಾನ, ರಿಕ್ಷಾ ನಿಲ್ದಾಣಕ್ಕೆ ಹಣ
ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಸ್ಮಶಾನಗಳಿಲ್ಲ. ಗ್ರಾಮಲೆಕ್ಕಾಧಿಕಾರಿಗಳು ಸ್ಥಳ ಗುರುತಿಸಿದರೆ ಶಾಸಕರ ನಿಧಿಯಿಂದ ಮೂರು ಲಕ್ಷ ರೂ. ಹಣ ನೀಡುತ್ತೇನೆ. ಎಲ್ಲಿ ಸ್ಮಶಾನದ ಅವಶ್ಯವಿದೆಯೊ ಅಲ್ಲಿ ಸ್ಥಳ ಗುರುತಿಸಿ ನನ್ನ ಗಮನಕ್ಕೆ ತನ್ನಿ ಎಂದರು. ಎಲ್ಲಿ ರಿಕ್ಷಾ ನಿಲ್ದಾಣದ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ರಿಕ್ಷಾ ನಿಲ್ದಾಣಕ್ಕೆ ಮೂರು ಲಕ್ಷ ರೂ ಅನುದಾನವನ್ನು ಶಾಸಕ ನಿಧಿಯಿಂದ ಕೊಡುತ್ತೇನೆ. ವಾಸ್ತವ್ಯವಿರುವ ಮನೆಗೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿಲು ಸತಾಯಿಸಬೇಡಿ. ಸಣ್ಣಪುಟ್ಟ ತೊಂದರೆಗಳಿದ್ದರೂ ಎನ್‌ಓಸಿ ನೀಡಿ. ಮುಂದೆ ಏನೇ ಸಮಸ್ಯೆಯಾದರೂ ನಾನು ನೋಡಿಕೊಳ್ಳುತ್ತೇನೆ. ಬಡವರ ಬಗ್ಗೆ ಸ್ವಲ್ಪ ಕನಿಕರ ತೋರಿಸಿ. ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರನ್ನು ಮಾತಾಡಿಸಬಹುದು. ಆದರೆ ಗ್ರಾ.ಪಂ ಪಿಡಿಓಗಳನ್ನು ಮಾತನಾಡಿಸುವುದೇ ಕಷ್ಟವಾಗಿದೆ.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕ .

Comments are closed.