ಮಂಗಳೂರು, ನವೆಂಬರ್.20: ಕೊಂಕಣಿಯ ಹ್ಯಾಟ್ರಿಕ್ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಂವೇದನಾಶೀಲ ಕಥಾ ಹಂದರವುಳ್ಳ ‘ಬೆಂಡ್ಕಾರ್’ ಕೊಂಕಣಿ ಸಿನಿಮಾವು ನ.22ರಂದು ಬಿಡುಗಡೆಗೊಳ್ಳಲಿದೆ ಎಂದು ನಟ-ನಿರ್ಮಾಪಕ ಸ್ಟಾನಿ ಆಲ್ವಾರೀಸ್ ಹೇಳಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಡ್ಕಾರ್’ ಕೊಂಕಣಿ ಸಿನಿಮಾವು ನ.22ರಂದು ಬೆಳಗ್ಗೆ 10 ಗಂಟೆಗೆ ಬಿಗ್ ಸಿನಿಮಾದಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ಅದೇ ದಿನ ಸಂಜೆ ಭಾರತ್ ಸಿನಿಮಾ, ಪಿವಿಆರ್ ಮಂಗಳೂರು, ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿ ಪ್ರದರ್ಶನ ಕಾಣಲಿದೆ. ಮುಂದಿನ ದಿನಗಳಲ್ಲಿ ಮುಂಬೈ ಹಾಗೂ ದೇಶದ ಇತರೆ ಸ್ಥಳಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಿನಿಮಾ ಮೊದಲು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿವೆ. ದುಬೈಯಲ್ಲೂ ಪ್ರಥಮ ಪ್ರದರ್ಶನ ಕಂಡ ಈ ಸಿನಿಮಾ ನಂತರ ಶಾರ್ಜ, ಅಬುದಾಬಿ, ಕತಾರ್ ಹಾಗೂ ಗೋವಾದಲ್ಲಿ ಕೂಡಾ ಪ್ರದರ್ಶನಗೊಂಡಿದೆ. ಇಸ್ರಾಯೆಲ್‌ನಲ್ಲಿ ಈ ತಿಂಗಳಾಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ ಎಂದವರು ತಿಳಿಸಿದರು.
ಬೆಂಡ್ಕಾರ್ ಎಂದರೆ ಬ್ರಾಸ್ ಬ್ಯಾಂಡ್ ಕಲಾವಿದ. ನಶಿಸುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯ ಬಗ್ಗೆ ಚಿಂತಿಸುವ, ಅದನ್ನು ಉಳಿಸಲು ಹೆಣಗುವ, ತನ್ನ ಕಿರಿ ಸೋದರನಿಗೆ ಈ ಕಲೆಯ ಬಗ್ಗೆ ಒಲವು ಮೂಡಿಸಲು ಶ್ರಮ ಪಡುವ ಬ್ರಾಸ್ ಬ್ಯಾಂಡ್ ಕಲಾವಿದನ ತುಮುಲಗಳ ಕಥೆ ಇದಾಗಿದೆ. ಗೋವಾದ ಕೊಂಕಣಿ ತ್ರಿಯಾತ್ರ್‌ಗಳ ಅನಭಿಶಿಕ್ತ ದೊರೆ ಪ್ರಿನ್ಸ್ ಜೇಕಬ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿ-ಮರಾಠಿ ಚಿತ್ತಗಳ ಮೇರು ನಟಿ ವರ್ಷಾ ಉಸ್ಗಾಂವ್ಕರ್ ಅತ್ತಿಗೆಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.
ಜೋನ್ ಡಿಸಿಲ್ವಾ, ಸ್ಟ್ಯಾನಿ ಆಲ್ವಾರಿಸ್, ಕೆನ ಡಿಮೆಲ್ಲೊ, ನೈಸಾ ಲೊಟ್ಲಿಕರ್, ಸುನೀತಾ ಮಿನೇಜಸ್, ದೀಪಕ್ ಪಾಲಡ್ಕಾ, ಜೋಸೆಫ್ ಮಥಾಯಸ್, ಕ್ಲಾಡಿ ಡಿಲೀಮಾ, ಸಲೋಮಿ, ಸ್ನೇಹಲತಾ ಮೆಹತಾ, ಆಲ್ವಿನ್ ಅಂದ್ರಾದೆ, ಸುಜಾತಾ ಆಂದ್ರಾದೆ, ಆರ್ಚಿಬಾಲ್ಡ್ ಘುರ್ಟಾದೊ, ಫ್ಲೋಯ್ಡೋ ಡಿಮೆಲ್ಲೊ ಮತ್ತಿತರು ಅಭಿನಯಿಸಿದ್ದಾರೆ.
ವಿಲ್ಸನ್ ಕಟೀಲ್ ಗೀತೆಗಳನ್ನು ರಚಿಸಿದ್ದು, ಪ್ಯಾಟ್ಸನ್ ಪಿರೇರಾ ಸಂಗೀತ ನೀಡಿದ್ದಾರೆ. ಶಫಿಕ್ ಶೇಖ್‌ರ ಕ್ಯಾಮರಾ ಕೈಚಳಕವಿದೆ. ಪಪ್ಪು ಖನ್ನಾ, ನಿಶಾಂತ್ ಮತ್ತು ಆಲ್ ಡಿಕ್ರೂಜ್ ನೃತ್ಯ ಸಂಯೋಜನೆ ಮಾಡಿದ್ದು, ಪ್ರೇಮ್ ಡಿಸೋಜ ನಿರ್ವಹಣಾ ಸಹಕಾರ ನೀಡಿದ್ದಾರೆ. ಕೊಂಕಣಿಯ ಎಲ್ಲಾ ಭಾಷಾ ಪ್ರಬೇಧಗಳ ಜನರನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. ಕೊಂಕಣಿಯ ಹ್ಯಾಟ್ರಿಕ್ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಕಥೆ, ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ ಎಂದು ಸ್ಟಾನಿ ಆಲ್ವಾರೀಸ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ನಿರ್ಮಾಪಕ ಡಾಲ್ಫಿ ರೆಬೆಲ್ಲೊ, ನಟ ದೀಪಕ್ ಡಿಸಿಲ್ವ, ಫ್ಲೊಯ್ಡೊ ಡಿಮೆಲ್ಲೊ, ಕಾಸ್ಸಿಯಾ, ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.