ಕರಾವಳಿ

ಜೋಡಿ ಕೊಲೆ ಹಾಗೂ ಮಹಿಳೆಗೆ ಗಂಭೀರ ಹಲ್ಲೆ ಪ್ರಕರಣ: 24 ಗಂಟೆಗಳ ಒಳಗಾಗಿ ಆರೋಪಿಯ ಬಂಧನ

Pinterest LinkedIn Tumblr

ಪುತ್ತೂರು: ತಾಲೂಕಿನ ಕುರಿಯ ಹೊಸಮಾರು ಎಂಬಲ್ಲಿ ನಡೆದ ಜೋಡಿ ಕೊಲೆ ಹಾಗೂ ಮಹಿಳೆಗೆ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (39) ಬಂಧಿತ ಆರೋಪಿ. ಈತ ಕಳ್ಳತನ ಮಾಡುವುದಕ್ಕಾಗಿ ಮನೆಯೊಳಗೆ ಪ್ರವೇಶಿಸಿದ್ದು, ಕಳವು ನಡೆಸುವ ವೇಳೆಯಲ್ಲಿ ಮನೆ ಮಂದಿ ಎಚ್ಚರಗೊಂಡ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿರುವುದಾಗಿ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೀಂ ಖಾನ್ ಕಳ್ಳತನ ನಡೆಸಲೆಂದು ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೊಗ್ಗು ಸಾಹೇಬ್ ಅವರ ಮನೆಗೆ ಹೋಗಿದ್ದು, ಮನೆಯ ಹಂಚು ಸರಿಸಿ ಒಳಗೆ ಪ್ರವೇಶಿಸಿ, ಕಳ್ಳತನ ನಡೆಸುವ ವೇಳೆಯಲಿ ಮನೆ ಮಂದಿಗೆ ಎಚ್ಚರವಾಗಿತ್ತು. ಮನೆಯವರ ಪರಿಚಯಸ್ಥನೇ ಆಗಿದ್ದ ಕರೀಂ ಖಾನ್ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಕೊಗ್ಗು ಸಾಹೇಬ್ ಅವರೊಂದಿಗೆ ಹಣಕಾಸಿನ ವಿಚಾರದಲ್ಲಿಯೂ ಕರೀಂ ಖಾನ್‍ಗೆ ಮನಸ್ಥಾಪವಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾನೆ.

ಇವೆಲ್ಲ ಕಾರಣಕ್ಕೆ ಮನೆಯ ಅಡುಗೆ ಕೋಣೆಯಲ್ಲಿದ್ದ ಕತ್ತಿಯಿಂದ ಮನೆಯಲ್ಲಿದ್ದ ಕೊಗ್ಗು ಸಾಹೇಬ್, ಅವರ ಪತ್ನಿ ಖತೀಜಮ್ಮ ಮತ್ತು ಮೊಮ್ಮಗಳು ಸಬೀಹಾ ಬಾನು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ, ಹಲ್ಲೆಯಿಂದ ಕೊಗ್ಗು ಸಾಹೇಬ್ ಮತ್ತು ಸಬೀಹಾ ಬಾನು ಸ್ಥಳದಲ್ಲಿಯೇ ಮೃತಪಟ್ಟು, ಖತೀಜಮ್ಮ ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಕೃತ್ಯ ನಡೆದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರ ಸಾಧನೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

Comments are closed.