ಕರಾವಳಿ

ಕಳಪೆ ಕಾಮಗಾರಿ ಸಹಿಸಲ್ಲ, ಪರ್ಸಂಟೇಜ್ ವ್ಯವಸ್ಥೆಯೇ ಇಲ್ಲ: ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ

Pinterest LinkedIn Tumblr

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಆಲೂರು ಎಂಬಲ್ಲಿ ಸೌಪರ್ಣಿಕಾ ನೀರಾವರಿ ಯೋಜನೆಯಲ್ಲಿ ಬರುವ ಪೈಪ್ ಲೈನ್ ಹಾಗೂ ಡೆಲಿವರಿ ಚೇಂಬರ್ ಕಾಮಗಾರಿ ಗುದ್ದಲಿ ಪೂಜೆ ಕಾರ್ಯವನ್ನು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಬುಧವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಇಲ್ಲಿನ ರೈತರಿಗೆ ಸಮರ್ಪಕವಾದ ನೀರನ್ನು ಪೂರೈಸುವ ನಿಟ್ಟಿನಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಉತ್ತಮ ರೀತಿಯಲ್ಲಿ ಆಧುನಿಕ ವ್ಯವಸ್ಥೆಯಡಿಯಲ್ಲಿ ಈ ಕಾಮಗಾರಿ ನಡೆಯಲಿದೆ. ಮೊದಲೆಲ್ಲಾ ಪರ್ಸೆಂಟೇಜ್ ವ್ಯವಸ್ಥೆಯಲ್ಲಿ ಕಾಮಗಾರಿ ನಡೆಸಿದ ಬಗ್ಗೆ ಮಾತುಗಳಿದ್ದವು. ಆದರೆ ತಾನು ಶಾಸಕನಾದ ಮೇಲೆ ಕಳಪೆ ಕಾಮಗಾರಿ, ಪರ್ಸಂಟೇಜ್ ಮೊದಲಾದವುಗಳನ್ನೆಲ್ಲಾ ನಿಲ್ಲಿಸಿದ್ದೇನೆ. ಬೈಂದೂರಿನ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕೆಲಸ ಕಾರ್ಯಗಳು ನಡೆಯುತ್ತಿದ್ದು ಆಲೂರು ಗ್ರಾಮಪಂಚಾಯತಿಗೆ ಒಟ್ಟು ಆರೂವರೆ ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಇದೇ ಸಂದರ್ಭ ರೈತ ಮಹಿಳೆಯರು ಆಗಮಿಸಿ ನೀರಿನ ಸಮಸ್ಯೆ ಕುರಿತು ಅಹವಾಲು ತೋಡಿಕೊಂಡಿದ್ದು ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಡ್ಯಾಂ ನಿರ್ಮಾಣದ ಕುರಿತು ಕ್ರಮಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭ ಆಲೂರು ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ, ಕಾಮಗಾರಿ ಗುತ್ತಿಗೆದಾರ ಗುತ್ತಿಗೆದಾರ ನಾರಾಯಣ ಶೆಟ್ಟಿ ಕಡ್ರಿ, ಸ್ಥಳೀಯ ಮುಖಂಡರಾದ ಚಿತ್ತರಂಜನ್ ಹೆಗ್ಡೆ ಹರ್ಕೂರು, ನಾಗರಾಜ ಶೆಟ್ಟಿ, ಚಂದ್ರಯ್ಯ ಆಚಾರ್ಯ ಕಳಿ, ಕಾಳಪ್ಪ ಶೆಟ್ಟಿ ಮೊದಲಾದವರಿದ್ದರು.

Comments are closed.