ಕರಾವಳಿ

ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಸ್ವಚ್ಛ ಭಾರತ ಚಿಂತನೆ ಅನುಷ್ಠಾನ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಮಹಾತ್ಮ ಗಾಂಧೀಜಿಯವರ, ನನ್ನ ಜೀವನವೇ ಒಂದು ಸಂದೇಶ ಎನ್ನುವ ಮಾತುಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು. ಗಾಂಧೀಜಿಯವರು ಈ ಕಾಲದಲ್ಲೂ ಪ್ರಸ್ತುತ ಏಕೆಂದರೆ ಗ್ರಾಮ ಸ್ವರಾಜ್ಯ, ಸ್ವಚ್ಛ ಭಾರತದಂತಹ ಅವರ ಚಿಂತನೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಆಯೋಜಿಸಲಾದ ಗಾಂಧೀಜಿಯವರ ಅಪೂರ್ವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯವರ ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸರಳವಾಗಿ ಜೀವಿಸುವುದನ್ನು, ಯಾವ ರೀತಿ ಹೋರಾಟ ಮಾಡಬೇಕೆನ್ನುವುದನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ. ಮಾತು ಕಡಿಮೆ, ಹೆಚ್ಚು ದುಡಿಮೆ ಮಾಡುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಕೆಲಸ ಕೀಳಲ್ಲ ಎಂದು ಹೇಳುತ್ತಿದ್ದ ಗಾಂಧೀಜಿ ತಾವೇ ಸ್ವತಃ ಶೌಚಾಲಯವನ್ನು ತೊಳೆಯುತ್ತಿದ್ದರು. ನಾವೆಲ್ಲರೂ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಧ್ಯವಾದಷ್ಟು ನಡೆಯುವ ಪ್ರಯತ್ನ ನಡೆಸಬೇಕೆಂದು ಹೇಳಿದರು. ಗಾಂಧೀಜಿಯವರ ಜೀವನ ಚರಿತ್ರೆಯನ್ನು ಫೋಟೋಗ್ರಫಿ ಮತ್ತು ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೋರಿಸುವಂತೆ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಡಿಸಿ ಹೇಳಿದರು.

ಗಾಂಧೀಜಿಯ ಬಗ್ಗೆ ಮಕ್ಕಳಲ್ಲಿ ಕೇಳಿದರೆ ಬಹುತೇಕರಿಗೆ ಅವರ ಜೀವನದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇಡೀ ಪ್ರಪಂಚದಲ್ಲೇ ಅತ್ಯಂತ ಪೂಜ್ಯನೀಯ ವ್ಯಕ್ತಿ ಈ ದೇಶದಲ್ಲಿದ್ದರು, ಅವರು ಸತ್ಯ, ಅಹಿಂಸೆ, ತ್ಯಾಗ ಮುಂತಾದ ಮೌಲ್ಯಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆನ್ನುವ ವಿಚಾರವೇ ಮಕ್ಕಳಿಗೆ ತಿಳಿದಿರುವುದಿಲ್ಲ. ಪೋಷಕರು ಮಕ್ಕಳಿಗೆ ಮಹಾತ್ಮಗಾಂಧೀಜಿ ಅವರ ಬಗ್ಗೆ ತಿಳಿಸಬೇಕು, ಪುಸ್ತುತ ಇಲ್ಲಿ ಆಯೋಜಿಸಿರುವ ಗಾಂಧಿ ಕುರಿತ ಛಾಯಾಚಿತ್ರ ಮತ್ತು 20 ನಿಮಿಷಗಳ ವೀಡಿಯೋವನ್ನು ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನೋಡಿ ಪ್ರೇರಣೆ ಪಡೆಯುವಂತೆ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ನವೆಂಬರ್ 7 ರಿಂದ 9 ರ ವರೆಗೆ 3 ದಿನಗಳ ಕಾಲ, ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಮಹಾತ್ಮಗಾಂಧೀಜಿ ಅವರ ಈ ಅಪೂರ್ವ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ಛಾಯಾಗ್ರಹಣವು ಪರಿಪಕ್ವವಾಗಿಲ್ಲದ ಕಾಲದಲ್ಲಿ, ಜಗತ್ತಿನಲ್ಲಿ ಅತೀ ಹೆಚ್ಚು ಛಾಯಾಚಿತ್ರೀಕರಿಸಿದ ವ್ಯಕ್ತಿಗಳಲ್ಲಿ ಮಹಾತ್ಮಾಗಾಂಧೀ ಪ್ರಮುಖರಾಗಿದ್ದಾರೆ. ಅಂದಿನ ಹಲವಾರು ಛಾಯಾಚಿತ್ರ ಗ್ರಾಹಕರು ಗಾಂಧೀಜಿ ಅವರ 10000 ಕ್ಕೂ ಮಿಕ್ಕಿ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ಚಿತ್ರಗಳಲ್ಲಿ ಗಾಂಧೀಜಿ ಅವರ ಜೀವನ, ವ್ಯಕ್ತಿತ್ವ ಮತ್ತು ಕಾರ್ಯಗಳನ್ನು ಪ್ರತಿಬಿಂಬಿಸುವ ಆಯ್ದ 100 ಛಾಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದ್ದು, ಇಲ್ಲಿರುವ ಛಾಯಾಚಿತ್ರಗಳ ಮೂಲ ಛಾಯಾಚಿತ್ರಗಳು ನವ ದೆಹಲಿಯಲ್ಲಿನ ಗಾಂಧೀ ನ್ಯಾಷನಲ್ ಮ್ಯೂಸಿಯಂ ಸಂಗ್ರಹಾರದಲ್ಲಿವೆ.

ಕಾರ್ಯಕ್ರಮದಲ್ಲಿ ಡಿಡಿಪಿಐ ಶೇಷಶಯನ ಕಾರಿಂಜ, ಬೋರ್ಡ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಲಾಸ್ ಕುಮಾರ್, ಹೈಸ್ಕೂಲ್ ವಿಭಾಗದ ಪ್ರಾಂಶುಪಾಲ ಸುರೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಸ್ವಾಗತಿಸಿದರು.

Comments are closed.