ಕರಾವಳಿ

ಬಿರುಕು ಬಿಟ್ಟ ಗೋಪಾಡಿ ಪಡು ಶಾಲೆ ಗೋಡೆ: K.W. ವರದಿಗೆ ಅಧಿಕಾರಿಗಳ ಸ್ಪಂದನೆ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿನ ಗೋಪಾಡಿ ಪಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕಟ್ಟಡದ ಗೋಡೆಯು ಎರಡು ಕಡೆಗಳಲ್ಲಿ ಬಿರುಕುಬಿಟ್ಟಿದ್ದು ಆತಂಕದ ನಡುವೆಯೇ ಮಕ್ಕಳು ವಿದ್ಯಾರ್ಜನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ‘ಕನ್ನಡಿಗ ವರ್ಲ್ಡ್’ ಅ.24 ರಂದು ‘ಗೋಪಾಡಿ ಪಡು ಶಾಲೆಯ ನಲಿಕಲಿ ತರಗತಿ ಗೋಡೆ ಬಿರುಕು: ಆತಂಕದಲ್ಲೇ ಪಾಠ, ಪ್ರವಚನ!’ ಎಂಬ ತಲೆಬರಹದಲ್ಲಿ ವರದಿ ಪ್ರಕಟಿಸಿದ್ದು ಅಧಿಕಾರಿಗಳು ವರದಿಗೆ ಸ್ಪಂದಿಸಿದ್ದಾರೆ.

ಶುಕ್ರವಾರದಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಿರುಕು ಬಿಟ್ಟ ಗೋಡೆಯಲ್ಲಿ ನಲಿಕಲಿ ತರಗತಿ ನಡೆಸದಂತೆ ಶಾಲಾ ಮುಖ್ಯಶಿಕ್ಷಕರಿಗೆ ಮೌಖಿಕ ಆದೇಶವನ್ನೂ ಮಾಡಿದ್ದರು.

ಶನಿವಾರ ಶಾಲೆಗೆ ಸಿ.ಆರ್.ಪಿ. ಶ್ಯಾಮಲಾ ಭೇಟಿ ನೀಡಿದ್ದು ಪೋಷಕರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ಪುತ್ರನ್, ಹಲವು ವರ್ಷಗಳ ಇತಿಹಾಸವುಳ್ಳ ಗೋಪಾಡಿ ಪಡುಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು ಶಾಲೆಯನ್ನು ಮುಚ್ಚುವ ಪ್ರಮೇಯವೇ ಇಲ್ಲ. ಸರಕಾರಿ ಶಾಲೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಈಗಾಗಲೇ ಶಾಸಕರ ಬಳಿ ಈ ಬಗ್ಗೆ ಮಾತನಾಡಿದ್ದು ಅವರು ಕೂಡ ಸ್ಪಂಧಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ತರಗತಿಯನ್ನು ಶಾಲೆ ಆವರಣದಲ್ಲಿರುವ ಕಂಪ್ಯೂಟರ್ ಕೊಠಡಿ ಮತ್ತು ರಂಗಮಂದಿರದಲ್ಲಿ ತರಗತಿ ಮಾಡುತ್ತೇವೆ ಎಂದರು.

ಸಭೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್, ಗೋಪಾಡಿ ಗ್ರಾ,ಪಂ ಸದಸ್ಯ ರಾಘವೇಂದ್ರ, ಶಾಲಾ ಮುಖ್ಯಶಿಕ್ಷಕ ಶ್ರೀನಿವಾಸ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಕಾಂಚನ್ ಸಂಗಮ್, ಪೋಷಕರು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿ- ಗೋಪಾಡಿ ಪಡು ಶಾಲೆಯ ನಲಿಕಲಿ ತರಗತಿ ಗೋಡೆ ಬಿರುಕು: ಆತಂಕದಲ್ಲೇ ಪಾಠ, ಪ್ರವಚನ!

Comments are closed.