ಕರಾವಳಿ

ಕುಂದಾಪುರದಲ್ಲಿ ಭಾನುವಾರ ಆಧಾರ್‌ಗೆ ಮುಗಿಬಿದ್ದ ಸಾವಿರಾರು ಮಂದಿ!

Pinterest LinkedIn Tumblr

ಕುಂದಾಪುರ: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು, ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಭಾನುವಾರ ನಡೆಸಿದ ಆಧಾರ್ ಅದಾಲತ್‌ಗೆ ಸಾವಿರಾರು ಮಂದಿ ಆಗಮಿಸಿದ್ದು ಬಹುತೇಕರು ನಿರಾಶರಾಗಿ ವಾಪಸಾದರು.

ಸಾರ್ವಜನಿಕರಿಗೆ ಪ್ರಯೋಜನವಾಗುವ ಹಿನ್ನೆಲೆ ಅಂಚೆ ಇಲಾಖೆ ಸಿಬಂದಿಯನ್ನು ಭಾನುವಾರದ ರಜೆಯಾದರೂ ಕೂಡ ಅಂಚೆ ಅಧೀಕ್ಷಕರು ಆಧಾರ್ ಅದಾಲತ್ ನಡೆಸಲು ಒಪ್ಪಿದ್ದರು. ಅದಕ್ಕಾಗಿಯೇ ಆಸುಪಾಸಿನ ಐದು ಅಂಚೆ ಕಚೇರಿಗಳಿಂದ ಸಿಬಂದಿ ಹಾಗೂ ಕಂಪ್ಯೂಟರನ್ನು ತರಿಸಲಾಗಿತ್ತು. ಒಂದು ಘಟಕದಲ್ಲಿ 1 ದಿನದಲ್ಲಿ ಸಾಮಾನ್ಯವಾಗಿ 50 ಮಂದಿ ಆಧಾರ್ ಪ್ರಕ್ರಿಯೆ ನಡೆಸಬಹುದು. ಈ ನಿಟ್ಟಿನಲ್ಲಿ ಸುಮಾರು 250-300 ಜನರಿಗೆ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ವ್ಯವಸ್ಥೆ ಮಾಡಿಕೊಂಡು ಅದಕ್ಕಾಗಿ ಪ್ರಾಮಾಣಿಕ ಕೆಲಸ ಮಾಡಿತ್ತು.

 

ಸಾವಿರಾರು ಮಂದಿಗೆ ನಿರಾಸೆ!
ಭಾನುವಾರ ರಜಾ ದಿನವಾದ್ದರಿಂದ ಅದಾಲತ್ ಆರಂಭಕ್ಕೂ ಒಂದೂವರೆ ತಾಸು ಮೊದಲೇ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಅಂಚೆ ಇಲಾಖಾ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅದಾಲತ್ ಆರಂಭವಾಗುವ ವೇಳೆಗೆ ಅಂದಾಜು 3 ಸಾವಿರ ಮಂದಿ ಸಾರ್ವಜನಿಕರು ಆಧಾರ್ ಸೇವೆಗಾಗಿ ಕಾಯುತ್ತಿದ್ದರು. ತತ್‌ಕ್ಷಣ ಅಂಚೆ ಇಲಾಖೆಯು ಇನ್ನೆರಡು ಘಟಕಗಳ ವ್ಯವಸ್ಥೆಯನ್ನು ಮಾಡಿತು. ಅದೇನೇ ಇದ್ದರೂ 300ರಿಂದ 400 ಮಂದಿಗಷ್ಟೇ ಪ್ರಯೋಜನ. ಆಧಾರ್ ಪ್ರಕ್ರಿಯೆಗಾಗಿ ಆಗಮಿಸಿದ ಅನೇಕರು ದಾಖಲೆಗಳ ಮೂಲಪ್ರತಿಯನ್ನು ತರದ ಕಾರಣ ಸಮಸ್ಯೆಯಾಯಿತು. ಸರಿಯಾದ ಮಾಹಿತಿ ಅರಿಯದೇ ಬಂದಿದ್ದರಿಂದ ಮರಳಿ ಹೋಗುವಂತಾಯಿತು.

ಪೊಲೀಸರ ನಿಯೋಜನೆ…
ಕುಂದಾಪುರ. ಬೈಂದೂರು ತಾಲೂಕಿನ ವಿವಿದೆಡೆಯಿಂದ ಜನರು ಆಗಮಿಸಿದ್ದರು. ಸಾರ್ವಜನಿಕರ ಜಮಾವಣೆ ಹೆಚ್ಚಾಗುತ್ತಿದ್ದಂತೆಯೇ ಸ್ಥಳದಲ್ಲಿ ಪೊಲೀಸ್ ನಿಯೋಜಿಸಲಾಯಿತು. ಅಂಚೆ ಕಚೇರಿ ರಸ್ತೆಯ ತುಂಬ ಸಾವಿರಾರು ಜನರ ಸರತಿ ಸಾಲು, ವಾಹನ ದಟ್ಟಣೆ ಹೆಚ್ಚಾಯಿತು. ಇದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬಳಿಕ ಅಂಚೆ ಕಚೇರಿಯ ಬಾಗಿಲು ಹಾಕಿ ನಿಗದಿತ ಸಂಖ್ಯೆಯ ಜನರನ್ನಷ್ಟೇ ಒಳ ಬಿಡುತ್ತಾ ಪ್ರಕ್ರಿಯೆ ನಡೆಸಲಾಯಿತು. ಈ ಮಧ್ಯೆ ಅನೇಕರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.

Comments are closed.