ಕರಾವಳಿ

ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ: ಉಡುಪಿ ಜಿಲ್ಲಾಧಿಕಾರಿ ಕರೆ

Pinterest LinkedIn Tumblr

ಉಡುಪಿ: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ರಕ್ತದಾನಕ್ಕೆ ಸಾರಿಸಾಟಿ ಯಾವೂದೂ ಇಲ್ಲಾ. ಒಂದು ಯುನಿಟ್ ರಕ್ತದಾನದ ಮೂಲಕ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ ಎಂದು ಜಿಲ್ಲಾಧಿಕಾರಿ ಜಗದೀಶ್ ಜಿ ಹೇಳಿದರು.

ಅವರು ಬುಧವಾರ ಜಿಲ್ಲಾ ಆಡಳಿತ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ ಮತ್ತು ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಚಿಟ್ಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ “ಜೀವಿತಾವಧಿಯಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ” ಎಂಬ ಘೋಷ ವಾಕ್ಯದಡಿಯಲ್ಲಿಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ 2019 ರ ಪ್ರಯುಕ್ತ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಚಿಟ್ಪಾಡಿಯಲ್ಲಿ ನಡೆದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು.

ಯುವಕರು ಪ್ರತೀ ಮೂರು ತಿಂಗಳಿಗೊಮ್ಮೆ ಹಾಗೂ ಯುವತಿಯರು ಪ್ರತೀ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದ್ದು, ತಮ್ಮ ಜೀವಿತಾವಧಿಯಲ್ಲಿ 240 ಬಾರಿ ರಕ್ತದಾನ ಮಾಡಬಹುದಾಗಿದ್ದು, ಕನಿಷ್ಠ 720 ಜೀವಗಳನ್ನು ಉಳಿಸಲು ಸಾಧ್ಯ. ಯುವಕರು ದೇಶದ ಆಧಾರ ಸ್ತಂಭ. ಸ್ವಾತಂತ್ರ್ಯ ಬಂದ 73 ವರ್ಷಗಳಲ್ಲಿ ಭಾರತೀಯರು ಪ್ರಪಂಚದ ಮೂಲೆ ಮೂಲೆಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಆದರೂ ಐಟಿಐಗಳಲ್ಲಿ ತರಬೇತಿ ಪಡೆದರೂ ಕಾರ್ಯ ಸ್ಥಳದಲ್ಲಿ ಅಚಲವಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಉಪನ್ಯಾಸಕರು ಆಲೋಚಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು. ಹಾಗೂ ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ನಿಂತು, ಇತರರಿಗೆ ಕೆಲಸ ನೀಡುವಂತಾಗಬೇಕು. ಮಾಡುವ ಪ್ರತೀ ಕಾರ್ಯವನ್ನು ಶೃದ್ಧೆಯಿಂದ ಮಾಡಿ, ಸದೃಢ ದೇಶ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್ ಹೆಚ್ ಮಾತನಾಡಿ, ರಕ್ತದಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಎಲ್ಲಾ ಜಿಲ್ಲೆಗಳಿಗೆ ಮಾದರಿಯಾಗಿದೆ. ಗ್ರಾಮ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಬೇಕು. ಜಿಲ್ಲೆಯಲ್ಲಿ ಮೂರು ರಕ್ತದಾನ ಕೇಂದ್ರಗಳಿದೆ. ಆದರೂ ಕೆಲವು ಸಂಧರ್ಭಗಳಲ್ಲಿ ರಕ್ತದ ಕೊರತೆ ಎದುರಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಕ್ತದ ಕೊರತೆಯನ್ನು ನೀಗುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಮಾತನಾಡಿ, ದೇಶ ಎಷ್ಟೇ ಮುಂದುವರೆದಿದ್ದರೂ ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ಅಪಘಾತ ಹಾಗೂ ಇತರ ಆರೋಗ್ಯ ಸಂಬಂಧಿತ ಪ್ರಕರಣಗಳಲ್ಲಿ ವ್ಯಕ್ತಿ ಮೂಲಕ ಮಾತ್ರವೇ ರಕ್ತ ಜೀವವನ್ನು ಉಳಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಯಾವುದನ್ನೂ ಬಯಸದೇ ಮಾಡುವ ದಾನ ರಕ್ತದಾನವಾಗಿದ್ದು, ಯುವ ಜನತೆ ಇಂತಹ ಕಾರ್ಯದಲ್ಲಿ ಯಾವುದೇ ಒತ್ತಡವಿಲ್ಲದೇ ಸ್ವಯಂ ಪ್ರೇರಿತರಾಗಿ ಭಾಗಿಯಾಗಬೇಕು ಎಂದು ಹೇಳಿದರು.

ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ. ವಲೇರಿಯನ್ ಮೆಂಡೋನ್ಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನಕ್ಕೆ ಬಹಳ ಮಹತ್ವವಿದ್ದು, ಯಾವುದೇ ಪ್ರಯೋಗಾಲಯಗಳಲ್ಲಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಯಾವುದೇ ಜಾತಿ, ಧರ್ಮಗಳ ಭೇಧವಿಲ್ಲ. ಒಬ್ಬ ದಾನಿ ನೀಡುವ ರಕ್ತ ಇನ್ನೊಂದು ಜೀವಕ್ಕೆ ಆಧಾರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಸ್ವಪ್ನಾ ಸುರೇಶ್, ವೇಣುಗೋಪಾಲ, ರೇಣು ಜಯರಾಂ, ಗುರುಮೂರ್ತಿ, ಗುರುಪ್ರಸಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಚಿಟ್ಪಾಡಿ ಸೈಂಟ್ ಮೇರಿಸ್ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗಿಲ್ಬರ್ಟ್ ಬ್ರಗಾಂಝಾ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್ ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಮಹಾಬಲೇಶ್ವರ್ ನಿರೂಪಿಸಿ, ವಂದಿಸಿದರು.

Comments are closed.