ಕರಾವಳಿ

ಬೈಂದೂರು ನಂದನವನದಲ್ಲಿ ಶತಮಾನದ ಇತಿಹಾಸವುಳ್ಳ ಸರಕಾರಿ ಶಾಲೆಯ ಕಟ್ಟಡ ಕುಸಿತ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಕೆರ್ಗಾಲ್ ಗ್ರಾಮ ವ್ಯಾಪ್ತಿಯ ನಂದನವನದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಹಾಗೂ ಮೇಲ್ಮಾಡು ಭಾನುವಾರ ಮುಂಜಾನೆ ಕುಸಿದ ಘಟನೆ ನಡೆದಿದೆ.

ಕಳೆದ ವಾರಗಳಿಂದ ತಾಲೂಕಿನಾದ್ಯಂತ ವಿಪರೀತ ಗಾಳಿ ಮಳೆಯಿರುವ ಹಿನ್ನೆಲೆ ಶತಮಾನಗಳ ಇತಿಹಾಸ ಇರುವ ನಂದನವನ ಶಾಲೆಯು ಶಿಥೀಲಗೊಂಡು ಕುಸಿದಿದೆ. ರಾತ್ರಿಯ ವೇಳೆ ಅವಘಡ ಸಂಭವಿಸಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಈ ಶಾಲೆಯಲ್ಲಿ ಸುಮಾರು ಹದಿನೈದು ವಿದ್ಯಾರ್ಥಿಗಳಿದ್ದು ಶಾಲೆಯ ಮದ್ಯ ಕೊಠಡಿ ಸೇರಿದಂತೆ ಒಟ್ಟು ಮೂರು ಕೊಠಡಿಗಳು ಹಾಗೂ ಮೇಲ್ಮಾಡು ಕುಸಿದಿದ್ದು 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದ್ದು ಕಟ್ಟಡ ನಿರ್ಮಿಸಿಮೂವತ್ತು ವರ್ಷಗಳಾಗಿತ್ತೆನ್ನಲಾಗಿದೆ.

ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶರತ ಕುಮಾರ್ ಶೆಟ್ಟಿ, ಸ್ಥಳೀಯ ಗ್ರಾಮಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಆಗಮಿಸಿ ಕಟ್ಟಡದ ಅವಶೇಷಗಳ ಒಳಗೆ ಸಿಲಿಕಿರುವ ವಸ್ತುಗಳನ್ನು ಹೊರತೆಗೆದರು. ಹಾಗೆಯೇ ತಹಸೀಲ್ದಾರರು ಸ್ಥಳಕ್ಕೆ ಭೇಟಿ ಕೊಟ್ಟು ಅಗತ್ಯ ಕ್ರಮ ಕೈಗೊಂಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.