ಕರಾವಳಿ

ತಲ್ಲೂರು ಪ್ರೌಢಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ದೇಶಾದ್ಯಂತ ಎಸ್‌ಪಿಸಿ ಆರಂಭದಾಗುತ್ತಿದ್ದು, ಪ್ರೌಢಶಾಲೆ ೮ನೇ ತರಗತಿ ವಿದ್ಯಾರ್ಥಿಗಳ ಪೊಲೀಸ್ ದಳಕ್ಕೆ ಆಯ್ಕೆ ಮಾಡಲಾಗುತ್ತಿದ್ದು, 22 ಬಾಲಕರು ಹಾಗೂ 22 ಬಾಲಕಿಯರ ಸೇರಿಸಿಕೊಂಡು ಒಟ್ಟು 44 ವಿದ್ಯಾರ್ಥಿಗಳಿಗೆ ತಿಂಗಳಲ್ಲಿ ಮೂರು ಶನಿವಾರ ತರಬೇತಿ ನೀಡುವ ಜೊತೆ ಟೋಪಿ ಹಾಗೂ ಕಾಕಿ ಸಮವಸ್ತ್ರ ನೀಡಲಾಗುತ್ತದೆ. ಜಿಲ್ಲಾ ಮೀಸಲು ಪಡೆ ಕಮಾಂಡೆಂಟ್ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳಲಿದ್ದು, ದೈಹಿಕ, ಭಾವನಾತ್ಮಕ ವಿಷಯ, ಕವಾಯಿತಿ, ರಸ್ತೆ ಸುರಕ್ಷತೆ, ವಾಹನ ಚಾಲನೆ ಕಾನೂನು ನಿಯಮಗಳ ಬಗ್ಗೆ ಹೇಳುವ ಜೊತೆ ಪೊಲೀಸರು ಮಾದಕ ವ್ಯಸನ ಜಾಗೃತಿ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಮಕ್ಕಳಲ್ಲಿ ಕಾನೂನು ಪಾಲನೆ ಬಗ್ಗೆ ಅರಿವು ಬಂದರೆ ಪೋಷಕರಿಗೂ ಅರಿವು ಮೂಡಿಸುತ್ತಾರೆ ಎಂಬ ಉದ್ದೇಶದಿಂದ ಎಪಿಜೆ ಅಬ್ದುಲ್ ಕಲಾಮ್ ಕಲ್ಪನೆಗೆ ಸಾಕಾರ ಕೊಡಲಾಗುತ್ತಿದೆ ಎಂದು ಕುಂದಾಪುರ ನಗರ ಠಾಣೆಯ ಪಿಎಸ್ಐ ಹರೀಶ್ ಆರ್.ನಾಯ್ಕ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆ, ಜಿಲ್ಲಾ ಪೊಲೀಸ್,ಕುಂದಾಪುರ ಠಾಣೆ ಹಾಗೂ ತಲ್ಲೂರು ಸಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಅತೀ ಹೆಚ್ಚು ಯುವ ಶಕ್ತಿ ಇರುವ ದೇಶ ನಮ್ಮದಾಗಿದ್ದರೂ ಮಾದಕ ದ್ರವ್ಯ ಮಾಫಿಯಾ ಯುವ ಸಮಾಜ ದಿಕ್ಕುತಪ್ಪಿಸುತ್ತಿದೆ. ಯುವ ಸಮಾಜ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಭವಿಷತ್ತಿನ ವಿದ್ಯಾರ್ಥಿಗಳ ಮೇಲಿದೆ. ಪೊಲೀಸ್ ದಳದ ಮಕ್ಕಳು ಪೋಷಕರಿಗೆ, ನೆರೆಕರೆಯ ಯುವಕರಿಗೆ ಮಾದಕ ದ್ರವ್ಯದ ದುಷ್ಪರಿಣಾಮ ತಿಳಿ ಹೇಳುವ ಮೂಲಕ ಯುವ ಸಮಾಜ ದಿಕ್ಕು ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರೌಢಶಾಲೆ ಹಂತ ವಿದ್ಯಾರ್ಥಿಗಳಲ್ಲಿ ಮಹತ್ತರ ಘಟ್ಟ್ಟವಾಗಿದ್ದು, ಈ ವಯಸ್ಸುನಲ್ಲಿ ಮಕ್ಕಳಿಗೆ ನೀಡುವ ತರಬೇತಿ ಜೀವನ ಪರ್ಯಂತ ಉಳಿಯುತ್ತದೆ. ಪ್ರೌಢ ಶೈಕ್ಷಣಿಕ ಮಕ್ಕಳಲ್ಲಿ ಜಾಗೃತಿ ಅರಿವು ಮೂಡಿಸಿದಾಗ ಪರಿವರ್ತನೆ ತರಲು ಸಾಧ್ಯ. ಪೊಲೀಸ್ ದಳಕ್ಕೆ ಸೇರಿದ ವಿದ್ಯಾರ್ಥಿಗಳ ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ಅರಿವು ಪಡೆದು, ಮನೆಯವರಿಗೂ ತಿಳಿ ಹೇಳುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಕಾವ್ರಾಡಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಎ.ನಾಯ್ಕ್, ತಲ್ಲೂರು ಗ್ರಾಪಂ ಸದಸ್ಯರಾದ ಉದಯ ಕುಮಾರ್ ತಲ್ಲೂರು, ಸರೋಜಮ್ಮ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಚಂದ್ರ ಪೂಜಾರಿ, ದಾನಿ ಸದಾನಂದ ಉಪ್ಪಿನಕುದ್ರು, ಮೀಸಲು ಪಡೆ ಕಮಾಡೆಂಟ್ ಜಾರ್ಚ್ ಗೋವಿಂದ ಕೊಪ್ಪದ ಇದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ವಿನಾಯಕ ವಿ.ನಾಯ್ಕ್ ಸ್ವಾಗತಿಸಿದರು. ಶಿಕ್ಷಕರಾದ ಗೋವಿಂದ ಹೆಚ್.ನಾಯ್ಕ್ ನಿರೂಪಿಸಿದರು. ಮಂಜುನಾಥ ವಂದಿಸಿದರು.

Comments are closed.