ಕರಾವಳಿ

‘ಸುಗಿಪು-ದುನಿಪು’ ಸಪ್ತಾಹ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀನಾರಾಯಣ ಹಾಗೂ ಸೀತಾರಾಮ ಕುಲಾಲ್ ರಿಗೆ ಶ್ರದ್ಧಾಂಜಲಿ

Pinterest LinkedIn Tumblr

ಮಂಗಳೂರು: ‘ ಬೆಳಗಾವಿಯ ವಜ್ರದೀಪ ಪ್ರಕಾಶನವು 1987ರಲ್ಲಿ ಮಂದಾರ ರಾಮಾಯಣವನ್ನು ಪ್ರಕಟಿಸಿದ ಸಂದರ್ಭದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಅದಕ್ಕೆ ಸಹಕಾರ ನೀಡಿದ್ದರು. ಅದಾದ 20 ವರ್ಷಗಳಲ್ಲಿ ಗ್ರಂಥದ ಪ್ರತಿಗಳೆಲ್ಲ ಖರ್ಚಾಗಿ ಲಭ್ಯವಿಲ್ಲದೆ ಹೋದಾಗ ಎಂ.ಕೆ.ಸೀತಾರಾಮ ಕುಲಾಲ್ ಅಧ್ಯಕ್ಷರಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2007ರಲ್ಲಿ ಸುವರ್ಣ ಕರ್ನಾಟಕ ಯೋಜನೆಯನ್ವಯ ಮಂದಾರ ರಾಮಾಯಣ ಕಾವ್ಯವನ್ನು ಮರುಮುದ್ರಣ ಮಾಡಿ ತುಳು ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ. ಮಂದಾರ ರಾಮಾಯಣದ ಪ್ರಸರಣ ಕಾರ್ಯದಲ್ಲಿ ಅಗಲಿದ ಈರ್ವರೂ ಪ್ರಧಾನ ಪ್ರೇರಕರು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ತುಳುವರ್ಲ್ಡ್ (ರಿ.) ಮಂಗಳೂರು ಮತ್ತು ತುಳುವೆರೆ ಕೂಟ (ರಿ.) ಶಕ್ತಿನಗರ ಇವುಗಳ ಜಂಟಿ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ ‘ಏಳದೆ ರಾಮಾಯಣ:ಸುಗಿಪು-ದುನಿಪು’ ಸಪ್ತಾಹ ಸಂದರ್ಭದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಈಚೆಗಷ್ಟೇ ನಿಧನರಾದ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮತ್ತು ನಾಟಕಕಾರ ಎಂ.ಕೆ.ಸೀತಾರಾಮ ಕುಲಾಲ್ ಅವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.

‘ಏರ್ಯ ಆಳ್ವರು ತುಳುನಾಡಿನ ಸನಾತನ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಪ್ರತಿನಿಧಿಯಾಗಿ ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದವರು.ಶತಮಾನದ ಹೊಸ್ತಿಲಲ್ಲಿದ್ದರೂ ತುಂಬು ಜೀವನೋತ್ಸಾಹದಿಂದ ಕೊನೆಯವರೆಗೂ ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಅವರು ತೊಡಗಿಕೊಂಡ ರೀತಿ ಇಂದಿನ ಯುವಕರಿಗೆ ಮಾದರಿ. ಅದರಂತೆ ಎಂ.ಕೆ. ಸೀತಾರಾಮ ಕುಲಾಲ್ ಅವರು ಹಲವು ನಾಟಕಗಳ ಕರ್ತೃವಾಗಿ, ರಂಗಭೂಮಿ ನಟರಾಗಿ, ಜನಪ್ರಿಯ ತುಳು ಚಿತ್ರಗೀತೆಗಳ ಜನಕರಾಗಿ ಮತ್ತು ಶ್ರೇಷ್ಠ ಆಡಳಿತಗಾರರಾಗಿ ವಿವಿಧ ಆಯಾಮಗಳಲ್ಲಿ ದುಡಿದವರು. ತುಳು ಅಕಾಡೆಮಿಗೆ ಸ್ವಂತ ನಿವೇಶನ ದೊರಕಿಸಿಕೊಡುವಲ್ಲಿ ಅವರ ಪ್ರಯತ್ನ ಪ್ರಶಂಸನೀಯ’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು.

ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಉದ್ಯಮಿ ಬಸ್ತಿ ದೇವದಾಸ ಶೆಣೈ, ಆದಾಯ ತೆರಿಗೆ ಅಧಿಕಾರಿ ಚಂದ್ರಕುಮಾರ್, ದೀಪಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ ಗಟ್ಟಿ, ತುಳು ಲಿಪಿ ಸಂಶೋಧಕ ಜೀವಿಯಸ್ ಉಳ್ಳಾಲ, ಭಾಗವತ ಹರೀಶ್ ಶೆಟ್ಟಿ ಸೂಡ, ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು, ತುಳುವೆರೆ ಕೂಟದ ಅಧ್ಯೆಕ್ಷೆ ಭಾರತಿ ಜಿ.ಅಮೀನ್, ಕಾರ್ಯದರ್ಶಿ ಸುಧಾಕರ ಜೋಗಿ, ಉಪಾಧ್ಯಕ್ಷ ಎನ್.ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು. ಮೃತರ ಗೌರವಾರ್ಥ ಸಭೆಯಲ್ಲಿ ಸಾಮೂಹಿಕ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತುಳುವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಅಳ್ವ ಸ್ವಾಗತಿಸಿದರು. ಸಂಚಾಲಕ ಹರ್ಷ ರೈ ಪುತ್ರಕಳ ವಂದಿಸಿದರು. ನಮ್ಮ ತುಳುನಾಡ್ ಟ್ರಸ್ಟ್ ನ ದಿನೇಶ್ ರೈ ಕಡಬ ನಿರೂಪಿಸಿದರು.

Comments are closed.