ಕುಂದಾಪುರ: ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಡೇರಹೋಬಳಿ ಗ್ರಾಮದ ಎ.ಕೆ.ಜಿ ರಸ್ತೆಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರು ತಿರುಗಾಡಬಾರದು ಎಂಬ ದುರುದ್ದೇಶದಿಂದ ಮಲಮೂತ್ರ, ಅನ್ನ ಸಾರು, ಬಿಸಿ ನೀರು, ಮನೆಯ ಎಲ್ಲಾ ತರದ ಇತರ ತ್ಯಾಜ್ಯಗಳನ್ನು ಹಾಕಿ ಸಂಚಾರಕ್ಕೆ ಅಡ್ಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಯ ಪರವಾಗಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಶನಿವಾರ ಆದೇಶಿಸಿದ್ದಾರೆ.

ಜೂ.13ರಂದು ಕುಂದಾಪುರದ ಎಕೆಜಿ ರಸ್ತೆಯ ನಿವಾಸಿಗಳಾದ ಸದಾನಂದ ಹವಲ್ದಾರ ಹಾಗೂ ಅವರ ಪತ್ನಿ ಮತ್ತು ಪುತ್ರಿ ನಡೆದಾಡುವ ರಸ್ತೆಗೆ ತ್ಯಾಜ್ಯಗಳನ್ನು ಸುರಿಯುವುದಲ್ಲದೇ ಮೈಗೂ ಕೂಡ ಎರಚಿದ್ದಾರೆಂದು ಪಿರ್‍ಯಾದಿ ಪರೀಕ್ಷಿತ್ ಕುಮಾರ್ ಜಿ. ಆರ್ ಕುಂದಾಪುರ ಠಾಣೆಗೆ ದೂರು ದಾಖಲು ಮಾಡಿದ್ದು ಈ ಬಗ್ಗೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಕೂಡ ಆಗಮಿಸಿ ಪರಿಶೀಲಿಸಿದ್ದರು. ಡಿವೈಎಸ್ಪಿ ದಿನೇಶ್ ಕುಮಾರ್ ಬಿ.ಪಿ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದು ಜೂ.19 ರಂದು ಆರೋಪಿ ಸದಾನಂದ ಬಂಧನವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆರೋಪಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಶನಿವಾರ ಅದರ ವಿಚಾರಣೆ ನಡೆಸಲಾಗಿತ್ತು.
ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿಯವರು ಇಂದೊಂದು ಸೂಕ್ಷ್ಮ ಪ್ರಕರಣವಾಗಿರುವ ಹಿನ್ನೆಲೆ ಜಾಮೀನು ನೀಡಬಾರದೆಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಪ್ರಾಸಿಕ್ಯೂಶನ್ ವಾದ ಪರಿಗಣಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.