ಕರಾವಳಿ

ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ: ಬೈಂದೂರು ಪೊಲೀಸರಿಂದ ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿ ನಗರದ ಕಾಲನಿಯಲ್ಲಿ ಮೇ 18ರಂದು ರಾತ್ರಿ ಮನೆಗೆ ನುಗ್ಗಿ ಮನೆಮಂದಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ನವೀನಚಂದ್ರ ಉಪ್ಪುಂದ ಹಾಗೂ ಆತನ ಪತ್ನಿ ಶೋಭಾ ಬಂಧಿತರಾಗಿದ್ದು, ಅವರಿಗೆ ಜೂ. 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಪ್ರಕರಣದ ವಿವರ…
ಗಂಗೆಬೈಲು ಗಾಂಧಿನಗರದ ಕಾಲನಿ ನಿವಾಸಿ ಶಾರದಾ ದೇವಾಡಿಗ ಅವರು ತಮ್ಮ ಮಕ್ಕಳೊಂದಿಗೆ ಕಿರಿಮಂಜೇಶ್ವರ ಜಾತ್ರೆಗೆ ಹೋಗಿ ರಿಕ್ಷಾದಲ್ಲಿ ಮನೆಗೆ ಬರುತ್ತಿದ್ದಾಗ ರಿಕ್ಷಾ ಕುಪ್ಪು ಖಾರ್ವಿ ಅವರ ಮನೆಯ ಮೋರಿಗೆ ತಾಗಿತ್ತು. ಆಗ ಕುಪ್ಪು ಖಾರ್ವಿ ಅವರ ಮಗಳು ಶೋಭಾ ಬೈದು ಕೈಯಿಂದ ಹಲ್ಲೆ ಮಾಡಿದ್ದಾರೆಂಬ ಬಗ್ಗೆ ಶಾರದಾ ದೇವಾಡಿಗ ಅವರು ಬೈಂದೂರು ಪೊಲೀಸರಿಗೆ ದೂರು ನೀಡಿ ಮನೆಗೆ ಬಂದು ರಾತ್ರಿ ಊಟ ಮಾಡುತ್ತಿದ್ದಾಗ ಕುಪ್ಪು ಖಾರ್ವಿ ಮಕ್ಕಳಾದ ಶೋಭಾ, ದಾಮೋದರ, ರತ್ನಾಕರ, ಸತೀಶ ಹಾಗೂ ಅಳಿಯ ನವೀನ ಚಂದ್ರ ಉಪ್ಪುಂದ ಅವರು ಕತ್ತಿ, ದೊಣ್ಣೆ, ರಾಡ್‌ ಮುಂತಾದ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ್ದರು. ಪೊಲೀಸರಿಗೆ ದೂರು ಕೊಟ್ಟದ್ದು ಯಾಕೆ ಎಂದು ಶಾರದಾ ದೇವಾಡಿಗರನ್ನು ಪ್ರಶ್ನಿಸಿದ ಶೋಭಾ ಕತ್ತಿಯಿಂದ ಹಲ್ಲೆ ನಡೆಸಿದ ಪರಿಣಾಮ ಕಿವಿ, ಕುತ್ತಿಗೆಗೆ ಗಾಯವಾಗಿದೆ.

ಆರೋಪಿ ಸತೀಶನು ರಾಡ್‌ನಿಂದ ಕಾಲುಗ ಳಿಗೆ ಹೊಡೆದಿದ್ದಾನೆ. ಆಗ ರಕ್ಷಣೆಗೆಂದು ಬಂದ ಶಾರದಾರ ಅಕ್ಕ ಸುಶೀಲಾರಿಗೆ ನವೀನಚಂದ್ರನು ದೊಣ್ಣೆಯಿಂದ ಹಲ್ಲೆ ಮಾಡಿ ದ್ದಾನೆ. ಆಗ ಮಗಳು ಮೋನಿಶಾ ಬೊಬ್ಬೆ ಹಾಕಿದ್ದು, ಅದನ್ನು ಕೇಳಿಸಿಕೊಂಡ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಅಕ್ಕ ಉಷಾ, ಅವರ ಪುತ್ರಿ ಶಾರದಾ ಮತ್ತು ಅಳಿಯ ಗಣೇಶ ಆಗಮಿಸಿದ್ದರು. ಅವರ ಮೇಲೂ ಆರೋಪಿಗಳಾದ ದಾಮೋದರ, ರತ್ನಾಕರ, ಶಿವರಾಮ ಅವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಬೈಂದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

Comments are closed.