ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ತಿದ್ದುಪಡಿ ಮಾಡಿರುವ ಸಾಧ್ಯತೆ ಕುರಿತು ಇಡೀ ರಾಷ್ಟ್ರದಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, “ಪ್ರಜಾಪ್ರಭುತ್ವದ ಆಧಾರದ ಮೇಲೆ ಸವಾಲೊಡ್ಡುವ ಊಹಾಪೋಹಗಳಿಗೆ ಯಾವುದೇ ಸ್ಥಳವಿಲ್ಲ. ಈ ಕುರಿತ ಸಂದೇಹಗಳನ್ನು ಚುನಾವಣಾ ಆಯೋಗ ನಿವಾರಿಸಬೇಕು” ಎಂದು ಹೇಳಿದ್ದಾರೆ.
ಇವಿಎಂ ಯಂತ್ರಗಳ ತಿದ್ದುಪಡಿ ವಿಚಾರದ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಣಬ್ ಮುಖರ್ಜಿ, ”ಮತದಾರರ ತೀರ್ಪನ್ನು ತಿರುಚುವ ಆರೋಪವನ್ನು ತಳ್ಳಿ ಹಾಕುವ ವರದಿ ಕುರಿತು ನನಗೆ ಕಾಳಜಿ ಇದೆ. ಇವಿಎಂ ಯಂತ್ರಗಳ ಸುರಕ್ಷತೆ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವದ ಆಧಾರದ ಮೇಲೆ ಸವಾಲು ಹಾಕುವ ಇಂತಹ ಊಹಾಪೋಹಗಳಿಗೆ ಇಲ್ಲಿ ಯಾವುದೇ ಸ್ಥಳವಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಜನರ ಆಜ್ಞೆ ಪವಿತ್ರವಾದದ್ದಾಗಿದ್ದು, ಇದು ಅನುಮಾನಿಸುವಂತಿರಬಾರದು” ಎಂದು ಅವರು ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಸೋಮವಾರ ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿದ್ದರು. 2019ರ ಲೋಕಸಭೆ ಚುನಾವಣೆಯನ್ನು ನಿಖರವಾಗಿ, ಪರಿಪೂರ್ಣವಾಗಿ ನಡೆಸಲಾಗಿದೆ. ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಚುನಾವಣಾ ಆಯುಕ್ತ ಸುಕುಮಾರ್ ಸೆನ್ ಕಾರಣ ಎಂದು ಶ್ಲಾಘಿಸಿದ್ದರು. ಅದರ ಮರುದಿನವೇ ಪ್ರಣಬ್ ಮುಖರ್ಜಿ ಹೀಗೊಂದು ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಇವಿಎಂ ಯಂತ್ರಗಳ ತಿರುಚುವಿಕೆ ಕುರಿತು ಕಳೆದ ಹಲವು ದಿನಗಳಿಂದ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಲೇ ಇವೆ. ಆದರೆ, ಈ ಕುರಿತ ಎಲ್ಲಾ ತಕಾರಾರುಗಳನ್ನು ಈವರೆಗೆ ಚುನಾವಣಾ ಅಲ್ಲಗೆಳೆಯುತ್ತಲೇ ಇದೆ. ಅಲ್ಲದೆ ಇವಿಎಂ ಯಂತ್ರ ಹಾಗೂ ವಿವಿ ಪ್ಯಾಟ್ ತಾಳೆ ಹಾಕಿ ಮತ ಎಣಿಸುವ ಕುರಿತು ವಿರೋಧ ಪಕ್ಷಗಳು ಸುಪ್ರೀಂ ಮೊರೆ ಹೋಗಿದ್ದವು. ಆದರೆ, ಈ ಅರ್ಜಿಯನ್ನೂ ಸಹ ಸುಪ್ರೀಂ ತಳ್ಳಿಹಾಕಿದೆ. ಈ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.