ಕರಾವಳಿ

ಪಲಿಮಾರು ಮಠದ 31ನೇ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರಿಗೆ ಪಟ್ಟಾಭಿಷೇಕ

Pinterest LinkedIn Tumblr

ಉಡುಪಿ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪಲಿಮಾರು ಮಠದ 31ನೇ ಯತಿಗಳಾಗಿ, ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾರಾಜೇಶ್ವರ ತೀರ್ಥರಿಗೆ ಪಟ್ಟಾಭಿಷೇಕ ಸಮಾರಂಭ ಭಾನುವಾರ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ನಡೆಯಿತು.

ಶುಕ್ರವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ನೂತನ ಯತಿಗೆ(ಶೈಲೇಶ್‌ ಉಪಾಧ್ಯಾಯ) ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಮಧ್ಯಾಹ್ನ 12.20ರ ಅಭಿಜಿನ್‌ ಲಗ್ನ ಸುಮುಹೂರ್ತದಲ್ಲಿ ಪಲಿಮಾರು ಮಠದ ನೂತನ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಿ ‘ಶ್ರೀ ವಿದ್ಯಾರಾಜೇಶ್ವರ ತೀರ್ಥ’ ಎಂಬ ನಾಮಕರಣ ಮಾಡಿದರು.

ಪಟ್ಟಾಭಿಷೇಕ ಮಹೋತ್ಸವಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರತೀರ್ಥ ಸ್ವಾಮೀಜಿ ಹಾಗೂ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಸಾಕ್ಷಿಗಳಾದರು.

ಧಾರ್ಮಿಕ ಕಾರ್ಯಕ್ರಮಗಳನ್ನು ವಿದ್ವಾಂಸ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲ್‌ ನಡೆಸಿಕೊಟ್ಟರು. ಪರ್ಯಾಯ ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ, ಕಂಬ್ಲಕಟ್ಟ ಸುರೇಂದ್ರ ಉಪಾಧ್ಯಾಯ ಮತ್ತಿತರ ವಿದ್ವಾಂಸರು ಉಪಸ್ಥಿತರಿದ್ದರು.

ಪಟ್ಟಾಭಿಷೇಕದ ಅಂಗವಾಗಿ ಬೆಳಗ್ಗೆ ತತ್ವ ಹೋಮ, ಅಷ್ಟ ಮಹಾಮಂತ್ರ ಹೋಮ, ವಿಶೇಷ ದಾನಗಳು ನಡೆದವು. 4 ವೇದಗಳ ಪಾರಾಯಣ, ರಾಮಾಯಣ, ಮಹಾಭಾರತ, ಮಧ್ವಾಚಾರ್ಯರ ಸರ್ವಮೂಲ ಗ್ರಂಥ, ಟೀಕಾಚಾರ್ಯರ ನ್ಯಾಯಸುಧಾ, ವಾದಿರಾಜರ ಲಕ್ಷ್ಮೇ ಶೋಭಾನೆ, ಜಗನ್ನಾಥಾಚಾರ್ಯರ ಹರಿಕಥಾಮೃತಸಾರ, ವಾಯುಸ್ತುತಿ ಪಠಣ ನಡೆಯಿತು. ಪಟ್ಟಾಭಿಷೇಕ ಸಂದರ್ಭ ರಾಜಾಂಗಣದಲ್ಲಿ ವಿದ್ವಾಂಸ ಡಾ. ಕೆ. ವೆಂಕಟೇಶಾಚಾರ್ಯ ನೇತೃತ್ವದಲ್ಲಿ ಶ್ರೀರಾಜರಾಜೇಶ್ವರತೀರ್ಥ ವಿರಚಿತ ಮಂಗಳಾಷ್ಟಕದ ಸಾಮೂಹಿಕ ಪಠಣ ನಡೆಯಿತು.

ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರನ್ನು ಬಿಟ್ಟರೆ ಸರ್ವಜ್ಞ ಪೀಠದಲ್ಲಿ ಪಟ್ಟಾಭಿಷೇಕಗೊಂಡ ಎರಡನೇ ಯತಿ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥರಾಗಿದ್ದಾರೆ.

Comments are closed.