ಕರಾವಳಿ

ಅಬ್ಬರಿಸುವ ಸಮುದ್ರ ಮಧ್ಯೆ ನಿಂತು ಕುಡಿಯುವ ನೀರಿಗೆ ಈ ಜನರ ಪರದಾಟ!

Pinterest LinkedIn Tumblr


ಅಬ್ಬರಿಸುವ ಸಮುದ್ರ, ನಾಲ್ಕು ಸುತ್ತಲೂ ನೀರು. ಆದರೆ ಬಾಯಾರಿದ್ರೆ ಹನಿ ನೀರಿಲ್ಲ ಇದು ಉಡುಪಿಯ ಸದ್ಯದ ಸ್ಥಿತಿ. ಈ ಬೇಸಿಗೆ ಕರಾವಳಿಯ ಜನರ ಪಾಲಿಗೆ ತ್ರಿಶಂಕು ಸ್ಥಿತಿ ತಂದೊಡ್ಡಿದೆ. ಯಾವತ್ತೂ ಇಲ್ಲದ ಬರದ ಸ್ಥಿತಿ ಉಡುಪಿಯಲ್ಲಿ ಬಂದಿದ್ಯೇನೋ ಅನ್ನಿಸುವಂತಿದೆ. ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯಲ್ಲಿ ಇನ್ನು 15ದಿನಗಳಷ್ಟು ಮಾತ್ರ ನೀರು ಪೂರೈಸಲು ಸಾಧ್ಯ ಅನ್ನೋ ನಗರಸಭೆ ಅಧಿಕಾರಿಗಳ ವರದಿ ಜಿಲ್ಲಾಧಿಕಾರಿಗಳನ್ನ ದಂಗುಬಡಿಸಿದೆ.

ಹೌದು, ಇನ್ನು ಉಡುಪಿ ಜನತೆಗೆ 15ದಿನಗಳಷ್ಟೇ ನೀರು ಪೂರೈಕೆ ಸಾಧ್ಯ ಅಂತ ಉಡುಪಿ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ನಗರಸಭಾ ವ್ಯಾಪ್ತಿಯಲ್ಲಿ ಅಕ್ಷರಶಃ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದೆಷ್ಟೋ ಮನೆಗಳಿಗೆ ನೆಂಟರಿಷ್ಟರು ಬರೋದನ್ನೇ ನಿಲ್ಲಿಸಿದ್ದಾರೆ. ಇನ್ನು ಅದೆಷ್ಟೋ ಮಂದಿ ಉಡುಪಿ ನಗರವನ್ನೇ ಬಿಡೋ ಸ್ಥಿತಿಯಲ್ಲಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಂತೂ ಹೊಳೆಗಳು ಬತ್ತಿಹೋಗುತ್ತಿವೆ. ಹೊಳೆಗಳಲ್ಲಿ ತುಂಬಿ ಹರಿಯುತ್ತಿದ್ದ ನೀರು ಕಣ್ಮರೆಯಾಗಿದೆ. ಇನ್ನು ಕೆಲವೇ ದಿನಗಳಷ್ಟೇ ಗ್ರಾಮಪಂಚಾಯತಿನ ಅಧಿಕಾರಿಗಳು ನೀರು ಪೂರೈಸಲು ಸಾಧ್ಯ ಅನ್ನುತ್ತಿದ್ದಾರೆ. ಹೀಗಾಗಿ ಗ್ರಾಮ ಹಾಗೂ ನಗರ ನಿವಾಸಿಗಳಲ್ಲಿ ನೀರಿಗಾಗಿ ಬಾಯಿ ಬಡಿದುಕೊಳ್ಳೋ ಸ್ಥಿತಿ ಸಾಮಾನ್ಯವಾಗಿದೆ. ನಗರ ಸಭೆಯ ಆಡಳಿತ ಯಂತ್ರ ಸ್ಥಗಿತಗೊಂಡ ಕಾರಣ ಜನ ಸಾಮಾನ್ಯರ ನೀರಿನ ಸಮಸ್ಯೆ ಕೇಳುವವರಿಲ್ಲ. ಜಿಲ್ಲೆಯಲ್ಲಿ ಮೂರ್ನಾಲ್ಕು ನದಿಗಳಿದ್ದರೂ ಕುಡಿಯಲು ನೀರಿಲ್ಲ. ದೇವರು ಯಥೇಚ್ಛವಾಗಿ ಕೊಟ್ಟ ನೀರನ್ನು ಸಹ ಸರಿಯಾಗಿ ಬಳಸಿಕೊಳ್ಳಲಾಗದ ದುಸ್ಥಿತಿ ಎದುರಾಗಿದೆ.

ಪ್ರಮುಖವಾಗಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರೋ 35 ವಾರ್ಡುಗಳಲ್ಲಿ 19.200ಕ್ಕೂ ಅಧಿಕ ನಳ್ಳಿ ಸಂಪರ್ಕವಿದೆ. 10,500 ಕ್ಕೂ ಅಧಿಕ ಮನೆಗಳಿದ್ದು ಈ ಎಲ್ಲಾ ಮನೆಗಳಿಗೆ ನೀರು ಪೂರೈಕೆಯು ಹೆಚ್ಚೆಂದ್ರೆ ಇನ್ನು ಒಂದು ತಿಂಗಳಷ್ಟೇ. ನಗರಸಭಾ ವ್ಯಾಪ್ತಿಗೆ ನೀರು ಪೂರೈಸೋ ಬಜೆ ಅಣೆಕಟ್ಟಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಪ್ರಸಕ್ತವಾಗಿ ಬಜೆ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಮಟ್ಟ ಕೇವಲ 2.69ಮೀಟರಷ್ಟಿದೆ. ಕಳೆದ ವರ್ಷ ನಾಲ್ಕು ಮೀಟರಿನಷ್ಟಿದ್ದ ನೀರಿನ ಮಟ್ಟ ಈ ವರ್ಷ 3ಕ್ಕಿಂತ ಕಡಿಮೆಯಾಗಿರೋದು ನಗರಸಭಾ ಅಧಿಕಾರಿಗಳ ಬೇಜವಾಬ್ದಾರಿಯನ್ನ ಎತ್ತಿಹಿಡಿದಿದ್ದು ಇದರಿಂದಾಗಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಜನ ಪ್ರತಿನಿಧಿ ಗಳು ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದಾರೆ.

Comments are closed.