ಕರಾವಳಿ

ಅತ್ಯಂತ ಭಯಾನಕ ರೋಗವಾಗಿರುವ ಸಿಓಪಿಡಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯ…

Pinterest LinkedIn Tumblr

ದೇಶದಲ್ಲಿ ಮೂರು ಕೋಟಿ ಜನರು ದೀರ್ಘ ಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ ಅಥವಾ ಸಿಓಪಿಡಿಯಿಂದ ಬಳಲುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಸಿಓಪಿಡಿ ವಿಶ್ವದಾದ್ಯಂತ 5ನೇ ಅತ್ಯಂತ ಭಯಂಕರ ರೋಗವಾಗಿದೆ. ಈ ಮೊದಲು ಸಿಓಪಿಡಿ ಧೂಮಪಾನಿಗಳ ರೋಗ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸಿಗರೇಟ್ ಸೇದದವರಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿರುವುದು ಅಭಿವೃದ್ಧಿಶೀಲ ದೇಶಗಳ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಶಾರೀರಿಕ ಅಸಮರ್ಥ್ಯ ಅಂದರೆ ಅಂಗವೈಕಲ್ಯಕ್ಕೆ ಕಾರಣವಾಗುವ ಈ ಸಿಓಪಿಡಿ 50 ವರ್ಷ ದಾಟಿದ ಭಾರತೀಯರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಧೂಮಪಾನ ಮಾಡದವರಲ್ಲೂ ಈ ರೋಗ ಉಂಟಾಗುತ್ತಿದೆ.

ಅಡುಗೆ ಸಂದರ್ಭದಲ್ಲಿ ಹೊಗೆಗೆ ಒಡ್ಡಿಕೊಳ್ಳುವುದರಿಂದಲೂ ಈ ಸಿಓಪಿಡಿ ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಹೊಗೆಗೆ ಒಡ್ಡಿಕೊಳ್ಳುವವರ ಸಂಖ್ಯೆ ಹೆಚ್ಚಿರುವುದು ಸಿಓಪಿಡಿ ಹೆಚ್ಚಾಗಲು ಕಾರಣ.

ದೇಶದ ನಗರ ಪ್ರದೇಶಗಳಲ್ಲಿ ಶೇ. 22 ಕುಟುಂಬಗಳು ಅಡುಗೆಗೆ ಕಟ್ಟಿಗೆ ಬಳಸುತ್ತಾರೆ, ಶೇ. 32 ಕುಟುಂಬಗಳು ಜೈವಿಕ ದ್ರವ್ಯದ ಸ್ಟೌವ್‌ಗಳನ್ನು ಬಳಸುತ್ತಾರೆ, ಶೇ. 8ರಷ್ಟು ಜನ ಸೀಮೆಎಣ್ಣೆ ಬಳಸುತ್ತಾರೆ ಉಳಿದವರು ಅಡುಗೆ ಅನಿಲ ಬಳಸುತ್ತಿದ್ದಾರೆ.

ಕಟ್ಟಿಗೆ, ಬೆರಣಿ, ಒಣಹುಲ್ಲಿನಂತಹ ಜೈವಿಕ ದ್ರವ್ಯದ ಹೊಗೆ ಧೂಮಪಾನದಷ್ಟೇ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಈ ಕಾರಣದಿಂದಲೇ ಸ್ತ್ರೀಯರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಿಓಪಿಡಿ ಪ್ರಸಂಗಗಳು ಹೆಚ್ಚಿವೆ.

ದೇಶದಲ್ಲಿ ಸಿಓಪಿಡಿಯಿಂದ ಹಲವು ಜನ ಮೃತಪಟ್ಟಿದ್ದಾರೆ. ಕಾರಣ ಈ ರೋಗವನ್ನು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಮಾ‌ಡದಿರುವುದು. ವಿಶೇಷವಾಗಿ ರೋಗಿಯು ಧೂಮಪಾನಿಯಲ್ಲದಿದ್ದಾಗ ರೋಗ ಪತ್ತೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರೊ. ಡಾ. ನಾಗರಾಜ್ ಹೇಳುತ್ತಾರೆ.

ಈಗ ನಾವು ಉಸಿರಾಡುತ್ತಿರುವ ಗಾಳಿಯ ಗುಣಮಟ್ಟವೂ ವಿಷಯುಕ್ತವಾಗಿದೆ. ಈ ಕಾರಣದಿಂದಲೂ ಶ್ವಾಸಕೋಶದ ರೋಗಗಳು ಹೆಚ್ಚಾಗುತ್ತಿವೆ ಎಂದು ಅವರು ತಿಳಿಸುತ್ತಾರೆ.

ಸಿಓಪಿಡಿ ಹೆಚ್ಚಾಗಲು ಮತ್ತೊಂದು ಕಾರಣ ಎಂದರೆ ಕೃಷಿಗೆ ಬಳಸುವ ಕೀಟನಾಶಕಗಳು. ದೀರ್ಘ ಕಾಲ ಈ ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿ ಸಿಓಪಿಡಿ ಬರಬಹುದು. ಜತೆಗೆ ಮನೆಯಲ್ಲಿ ಬಳಸುವ ಸೊಳ್ಳೆ ದೂರ ಮಾಡುವ ಮಸ್ಕಿಟೋ ಕಾಯ್ಲ್ 100 ಸಿಗರೇಟುಗಳಿಂದ ಬರುವಷ್ಟು ಹೊಗೆ ಬರುತ್ತದೆ. ಹಾಗಾಗಿಯೇ ಈ ವಸ್ತುಗಳನ್ನು ಬಳಸುವಾಗ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸಿಓಪಿಡಿಗೆ ಬಲಿಯಾಗಬೇಕಾಗುತ್ತದೆ.

ಆಗಾಗಾ ತಪಾಸಣೆ ಮಾಡಿಸಿಕೊಳ್ಳುವುದರಿಂದ ಈ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಈ ರೋಗದಿಂದ ಪಾರಾಗಬಹುದು.

Comments are closed.