ಕರಾವಳಿ

ಹಳೆಯ ದಿನಪತ್ರಿಕೆಗಳಲ್ಲಿ ಕಟ್ಟಿಸಿಕೊಂಡ ತಿಂಡಿ-ತಿನಿಸು ತಿನ್ನುವ ಮುನ್ನ ಈ ವರದಿ ಒಮ್ಮೆ ಓದಿ…

Pinterest LinkedIn Tumblr

ನೀವು ರಸ್ತೆ ಬದಿಯ ಅಂಗಡಿ, ಉಪಾಹಾರ ಮಂದಿರ ಅಥವಾ ಹೋಟೆಲ್‌ನಿಂದ ಹಳೆಯ ದಿನಪತ್ರಿಕೆಗಳಲ್ಲಿ ತಿಂಡಿ-ತಿನಿಸು ಕಟ್ಟಿಸಿಕೊಂಡು ಹೋಗುತ್ತೀರಾ? ಹಾಗಿದ್ದರೆ ಎಚ್ಚರ… ಇಂತಹ ಪೇಪರ್‌ನಲ್ಲಿ ಕಟ್ಟಿಸಿಕೊಂಡ ತಿಂಡಿಯಿಂದಾಗಿ ನಿಮಗೆ ಕ್ಯಾನ್ಸರ್‌ನಂತಹ ಪ್ರಾಣಾಪಾಯಕಾರಿ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆ!

ಇಂತಹದೊಂದು ಎಚ್ಚರಿಕೆ ನೀಡಿರುವುದು ಇತ್ತೀಚೆಗಷ್ಟೇ ಮ್ಯಾಗಿ ಸೇರಿ ವಿವಿಧ ನೂಡಲ್ಸ್‌ಗಳಲ್ಲಿ ಅಪಾಯಕಾರಿ ಅಂಶಗಳನ್ನು ಪತ್ತೆ ಹಚ್ಚಿದ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ).

ಈ ಕುರಿತಂತೆ ಇತ್ತೀಚೆಗೆ ಸಲಹಾ ರೂಪದ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಪ್ರಾಧಿಕಾರ, ದಿನಪತ್ರಿಕೆಗಳಲ್ಲಿರುವ ಶಾಯಿ ಇರುತ್ತದೆ. ಇದು ಕ್ಯಾನ್ಸರ್‌ಕಾರಕವಾಗಿದ್ದು, ಇಂತಹ ಪೊಟ್ಟಣದಲ್ಲಿ ಕಟ್ಟಿದ ತಿಂಡಿಯನ್ನು ತಿನ್ನುವ ಜನರ ದೇಹಕ್ಕೆ ನಿಧಾನವಾಗಿ ವಿಷ ಸೇರಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಎಚ್ಚರಿಕೆ: ಸಾಮಾನ್ಯವಾಗಿ ಬೀದಿ ಬದಿಯ ತಿಂಡಿ-ತಿನಿಸುಗಳ ವ್ಯಾಪಾರಿಗಳು ದಿನಪತ್ರಿಕೆಗಳಲ್ಲಿ ತಿಂಡಿ ಕಟ್ಟಿ ಕೊಡುತ್ತಾರೆ. ಆಹಾರ ಶುದ್ಧ ಇದ್ದರೂ ದಿನಪತ್ರಿಕೆಗಳಲ್ಲಿನ ಮಸಿ (ಇಂಕ್‌) ಯಲ್ಲಿ ಕ್ಯಾನ್ಸರ್‌ ಕಾರಕ ರಾಸಾಯನಿಕ ಅಂಶಗಳಿರುತ್ತವೆ. ಇವು ಆಹಾರ ಸೇರಿಕೊಂಡರೆ ಕ್ಯಾನ್ಸರ್‌ನಂಥ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಎಫ್ಎಸ್‌ಎಸ್‌ಎಐ ಎಚ್ಚರಿಕೆ ರೂಪದ ಅಂಶಗಳನ್ನು ಬಿಡುಗಡೆ ಮಾಡಿದೆ.

ಪತ್ರಿಕೆಗಳು, ಕಾಗದಗಳು ಅಥವಾ ಮರುಬಳಕೆಯಿಂದ ತಯಾರಾದ ಕಾರ್ಡ್‌ಬೋರ್ಡ್‌ ಬಾಕ್ಸ್‌ಗಳಲ್ಲಿ ಮೆಟಾಲಿಕ್‌ ಅಂಶಗಳು, ಖನಿಜಯುಕ್ತ ತೈಲದ ಅಂಶಗಳು, ಅಪಾಯಕಾರಿ ರಾಸಾಯನಿಕಗಳಾದ ಪೆಥಾಲೇಟ್‌, ಮೊದಲಾದ ಅಂಶಗಳಿರುತ್ತವೆ. ಇವುಗಳು ಜೀರ್ಣಶಕ್ತಿಯನ್ನು ಕುಂಠಿತಗೊಳಿಸುತ್ತವೆ ಹಾಗೂ ವಿಷಕಾರಿ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಲಾಗಿದೆ.

ವೃದ್ಧರು, ಹದಿಹರೆಯದ ವಯಸ್ಸಿನವರು, ಮಕ್ಕಳು ಹಾಗೂ ಮಹತ್ವದ ಅಂಗಾಂಗ ವೈಫ‌ಲ್ಯಕ್ಕೆ ಈಡಾದವರು ಇದರಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ಕ್ಯಾನ್ಸರ್‌ ಭೀತಿಯೂ ಇರುತ್ತದೆ ಎಂದು ತಿಳಿಸಲಾಗಿದೆ.

ಹೀಗಾಗಿ ಪತ್ರಿಕೆಗಳನ್ನು ಆಹಾರ ಕಟ್ಟಲು ಬಳಸಕೂಡದು. ಈ ಬಗ್ಗೆ ಸರ್ಕಾರದ ಸಿಬ್ಬಂದಿ ಕ್ರಮ ಜರುಗಿಸಬೇಕು ಎಂದು ಅದು ಮನವಿ ಮಾಡಿದೆ.

ದಿನಪತ್ರಿಕೆಗಳಲ್ಲಿ ಆಹಾರ ಕಟ್ಟಿಕೊಡುವುದರ ವಿರುದ್ಧ ಮಾರ್ಗಸೂಚಿ ಜಾರಿ ಮಾಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸೂಚನೆ ನೀಡಿದ್ದರು. ಇದರನ್ವಯ ಎಫ್ಎಸ್‌ಎಸ್‌ಎಐ, ಮಾರ್ಗಸೂಚಿ ಜಾರಿಗೊಳಿಸಿದೆ.

Comments are closed.