ಕರಾವಳಿ

ನಾಳೆಯಿಂದ ಮಂಗಳೂರಿನಲ್ಲಿ ಶ್ರೀ ರಾಮೋತ್ಸವ : ಎಪ್ರಿಲ್ 28ರಂದು ರಾವಣ ದಹನ ಹಾಗೂ ಸುಡುಮದ್ದು ಪ್ರದರ್ಶನ

Pinterest LinkedIn Tumblr

ಮಂಗಳೂರು : ಎಪ್ರಿಲ್ 26ರಿಂದ 28ರವರೆಗೆ ನಗರದ ನೆಹರೂ ಮೈದಾನದಲ್ಲಿ ವೇದಮೂರ್ತಿ ಗಿರಿಧರ್ ಭಟ್ ಪೌರೋಹಿತ್ಯದಲ್ಲಿ ಶ್ರೀ ರಾಮೋತ್ಸವವು ನಡೆಯಲಿದೆ.

ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ರಾಮ್‌ಪ್ರಸಾದ್ ಅವರು, ವಿಶ್ವ ಹಿಂದೂ ಪರಿಷತ್-ಶ್ರೀ ರಾಮೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ರಾಮೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಎ.26ರಂದು ಬೆಳಗ್ಗೆ 10:30ಕ್ಕೆ ಧ್ವಜಾರೋಹಣದ ಬಳಿಕ ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕವಾಗಿ ನರ್ತನ ಭಜನಾ ಸ್ಪರ್ಧೆ ಜರುಗಲಿದೆ. ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.

ಎ.27ರಂದು ಗೋ ಪೂಜೆ, ಶ್ರೀರಾಮ ದೇವರಿಗೆ ಗಂಗಾ ಅಭಿಷೇಕ, ಹರಿಕಥಾ ಸತ್ಸಂಗ, ಸಂಜೆ 5ಕ್ಕೆ ಧಾರ್ಮಿಕ ಸಭೆ ಜರಗಲಿದೆ. ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಎ.28ರಂದು ರಾಮಾಯಣದ ಬಗ್ಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ, 5-10 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 7ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9 ಗಂಟೆಗೆ ರಾವಣ ದಹನ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ರಾಮ್‌ಪ್ರಸಾದ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಮೋತ್ಸವ ಸಮಿತಿ ಕಾರ್ಯದರ್ಶಿ ಮನೋಹರ್ ಸುವರ್ಣ, ವಿಹಿಂಪ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಜಗದೀಶ ಶೇಣವ, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ ಉಪಸ್ಥಿತರಿದ್ದರು.

Comments are closed.