ಕರಾವಳಿ

ಸೌಕೂರು ದುರ್ಗಾಪರಮೇಶ್ವರೀ ದೇವಸ್ಥಾನ, ಜ್ಯೋತಿಷಿಗಳ ಮನೆಗೆ ಸಿಎಂ ಎಚ್.ಡಿ.ಕೆ ಭೇಟಿ!

Pinterest LinkedIn Tumblr

ಕುಂದಾಪುರ: ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಮ್ಮ ಕುಟುಂಬ ಸದಸ್ಯರು ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ಮೇಲೆ ಮಾನಸಿಕ ಒತ್ತಡತರಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನಿರಂತರವಾಗಿ ಐಟಿ ದಾಳಿಯನ್ನು ಸಂಘಟಿಸುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಇಲಾಖೆಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮನ್ನು ದೃತಿಗೇಡಿಸುವ ಯಾವ ಪ್ರಯತ್ನಗಳು ಯಶಸ್ಸು ಕಾಣೋದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ರಾತ್ರಿ ವೇಳೆ ಇಲ್ಲಿಗೆ ಸಮೀಪದ ಸೌಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೌಕೂರು ಬೀದಿ ಮನೆಯ ಜ್ಯೋತಿಷಿ ಸೊಕ್ಕೊಟ್ಟು ಮಂಜುನಾಥಯ್ಯ (ಹೆಬ್ಬಾರ್‌) ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನ್ಯಾಯಯುತವಾದ ಮಾರ್ಗದಲ್ಲಿ ಚುನಾವಣೆ ನಡೆಸುವ ವಿಶ್ವಾಸ ಇರುವ ನಮ್ಮ ಕುಟುಂಬ ಇಂತಹ ವ್ಯವಸ್ಥಿತ ದಾಳಿಯಿಂದ ಯಾವುದೆ ರೀತಿಯಿಂದಲೂ ಆತಂಕಕ್ಕೆ ಒಳಗಾಗಿಲ್ಲ. ಕಳೆದ ಒಂದು ತಿಂಗಳಿಂದ ಚುನಾವಣಾ ಕಾರ್ಯಗಳಿಗಾಗಿ ಹೆಲಿಕ್ಯಾಪ್ಟರ್‌ ಬಳಕೆಗೆ ಅನುಮತಿಯನ್ನು ಕೇಳುತ್ತಿದ್ದರೂ ವಿಪಕ್ಷದ ನಾಯಕರುಗಳಿಗೆ ಹೆಲಿಕ್ಯಾಪ್ಟರ್‌ ದೊರಕುತ್ತಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಆಂಧ್ರ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿ ಇದೆ. ಕೇಂದ್ರದ ಇಲಾಖೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ವಿಪಕ್ಷವನ್ನು ಮಣಿಸಬಹುದು ಎನ್ನುವ ಬಿಜೆಪಿ ಪಕ್ಷಕ್ಕೆ ಕಾಲವೇ ಉತ್ತರ ನೀಡಲಿದೆ.

ಕೆಲವೇ ಎಲೆಕ್ಟ್ರಾನಿಕ್ಸ್‌ ಮಾಧ್ಯಮಗಳ ವೈಭೀಕರಣದಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೈ ವೋಲ್ಟೇಜ್‌ ಚುನಾವಣೆ ಎಂದು ಬಿಂಬಿಸಲಾಗುತ್ತಿದೆ. ಚಿತ್ರ ನಟರ ಉಪಸ್ಥಿತಿಗಳಿಗೆ ವಿಪರೀತ ಪ್ರಚಾರ ನೀಡಲಾಗುತ್ತಿದೆ. ಆದರೆ ಅಲ್ಲಿನ ವಾಸ್ತವ ಸ್ಥಿತಿ ಬೇರೆ ಇದೆ. ಜನ ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯ ಚುನಾವಣೆಯನ್ನು ನೋಡುತ್ತಿದ್ದಾರೆ. ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸುವ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಕುರಿತು ಒಲವು ಹೆಚ್ಚುತ್ತಿರುವುದರಿಂದ ಬಿಜೆಪಿ ವಾಮಮಾರ್ಗದಿಂದ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು 1985 ರಲ್ಲಿ ತಂದೆ ಎಚ್‌,ಡಿ.ದೇವೇಗೌಡರು ಸೌಕೂರಿನ ಸೊಕ್ಕೊಟ್ಟು ಮಂಜುನಾಥಯ್ಯ ಅವರ ಮನೆಗೆ ಭೇಟಿ ನೀಡಿದ್ದರು. ಅವರ ಆಶೀರ್ವಾದ ಪಡೆದುಕೊಳ್ಳಲು ಆಗಮಿಸಿದ್ದೇನೆ. ಈ ಭೇಟಿಗೆ ಯಾವುದೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ದ್ವಾರಕನಾಥ್‌ ಸಲಹೆ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜ್ಯೋತಿಷಿ ಸೊಕ್ಕೊಟ್ಟು ಮಂಜುನಾಥಯ್ಯ ಅವರು ಬೆಂಗಳೂರಿನ ಪ್ರಸಿದ್ಧ ಜ್ಯೋತಿಷಿ ರಾಜಗುರು ದ್ವಾರಕನಾಥ ಹಾಗೂ ನಾವು ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಧರ್ಮ ಸೂಕ್ಷ್ಮ ವಿಚಾರಗಳನ್ನು ನಾವು ಪರಸ್ಪರ ಚರ್ಚಿಸುತ್ತೇವೆ. ಅವರ ಸಲಹೆಯಂತೆ ಮುಖ್ಯಮಂತ್ರಿಗಳು ನಮ್ಮಲ್ಲಿ ಆಗಮಿಸಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇ ಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಕಿಶೋರ ಬಲ್ಲಾಳ್‌ ಕುಂದಾಪುರ, ಸಬ್ಲಾಡಿ ಮಂಜಯ್ಯ ಶೆಟ್ಟಿ ಇದ್ದರು.

Comments are closed.