ಕರಾವಳಿ

ಬೇಸಿಗೆಯಲ್ಲಿ ಚರ್ಮಕ್ಕೆ ಹಾನಿಕಾರವಾದ ಕೆಲವು ಆಹಾರಗಳು.

Pinterest LinkedIn Tumblr

ನೀವು ನಿಮ್ಮ ಚರ್ಮದ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲವೇ? ಇದಕ್ಕೆ ನಿಮ್ಮ ಆಹಾರ ಪ್ರಮುಖ ಕಾರಣವಾಗಿರಬಹುದು. ನೀವು ಸೇವಿಸುವ ಆಹಾರವು ನಿಮ್ಮ ಚರ್ಮದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಸೂಕ್ತವಲ್ಲದ ಆಹಾರಗಳು ಚರ್ಮದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಬೇಸಿಗೆಯಲ್ಲಿ ಚರ್ಮಕ್ಕೆ ಹಾನಿಕಾರವಾದ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ…..

ಅತಿಯಾದ ಕೆಫೀನ್ ಸೇವನೆ
ಕೆಫೀನ್‌ಯುಕ್ತ ಪಾನೀಯಗಳು ಇಂದು ಸುಲಭವಾಗಿ ಲಭ್ಯವಾಗುತ್ತಿವೆ. ಕೆಫೀನ್ ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಬೇಗನೇ ವಯಸ್ಸಾಗುವಂತೆ ಮಾಡುತ್ತದೆ. ಅತಿಯಾದ ಕೆಫೀನ್ ಸೇವನೆಯಿಂದ ಚರ್ಮದಲ್ಲಿ ನಿರಿಗೆಗಳು ಉಂಟಾಗುತ್ತವೆ ಮತ್ತು ಆಳವಾದ ಗೆರೆಗಳು ಎದ್ದು ಕಾಣುತ್ತವೆ. ನಿಮ್ಮ ಚರ್ಮದ ಆರೋಗ್ಯ ಮತ್ತು ತಾರುಣ್ಯವನ್ನು ಕಾಯ್ದುಕೊಳ್ಳಲು ಹೆಚ್ಚೆಚ್ಚು ನೀರನ್ನು ಸೇವಿಸುತ್ತಿರಬೇಕು.

ಮಸಾಲೆ ಭರಿತ ಆಹಾರ
ಆಹಾರದಲ್ಲಿ ಅತಿಯಾದ ಮಸಾಲೆಯಿದ್ದರೆ ಅದು ಚರ್ಮಕ್ಕೆ ಕೆಟ್ಟದ್ದು. ಅದು ಮೊಡವೆಗಳಿಗೆ ಕಾರಣವಾಗುತ್ತದೆ. ಮಸಾಲೆಭರಿತ ಆಹಾರಗಳು ಶರೀರದ ಉಷ್ಣತೆಯನ್ನು ಹೆಚ್ಚಿಸುವುದರಿಂದ ಚರ್ಮದ ರಕ್ತನಾಳಗಳು ಹಿಗ್ಗುತ್ತವೆ. ಅತಿಯಾದ ಮಸಾಲೆಯು ಚರ್ಮದಲ್ಲಿ ಉರಿಯೂತ ಸಮಸ್ಯೆಗೂ ಕಾರಣವಾಗುತ್ತದೆ. ಹಿತಮಿತವಾದ ಪ್ರಮಾಣದಲ್ಲಿ ಮಸಾಲೆಯಿರುವ ಆಹಾರವನ್ನೇ ಸೇವಿಸಿದರೆ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

ಸಕ್ಕರೆ ಭರಿತ ಆಹಾರಗಳು
ಸಕ್ಕರೆಯು ದೇಹದ ತೂಕವನ್ನು ಹೆಚ್ಚಿಸುತ್ತದೆ ಮತ್ತು ಶರೀರದ ಒಟ್ಟಾರೆ ಆರೋಗ್ಯಕ್ಕೆ ಕೆಟ್ಟದ್ದು ಮಾತ್ರವಲ್ಲ,ಅದು ಚರ್ಮಕ್ಕೂ ಹಾನಿಯನ್ನುಂಟು ಮಾಡುತ್ತದೆ. ಅತಿಯಾದ ಸಕ್ಕರೆಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಶರೀರದ ಹೋರಾಟವನ್ನು ಕಠಿಣಗೊಳಿಸುತ್ತದೆ. ಇದು ಮೊಡವೆಗಳಿಗೆ ಮತ್ತು ಇತರ ಚರ್ಮ ಉರಿಯೂತ ಸ್ಥಿತಿಗಳಿಗೆ ಕಾರಣವಾಗುತ್ತದೆ. ಚರ್ಮದ ಆರೋಗ್ಯದ ದೃಷ್ಟಿಯಿಂದ ಅತಿಯಾದ ಸಕ್ಕರೆ ಮತ್ತು ಸಕ್ಕರೆಯಿಂದ ತುಂಬಿದ ಖಾದ್ಯ ಉತ್ಪನ್ನಗಳ ಸೇವನೆಯನ್ನು ನಿವಾರಿಸಬೇಕು.

ಮದ್ಯ
ಮದ್ಯಸೇವನೆಯು ಶರೀರದ ಒಟ್ಟಾರೆ ಆರೋಗ್ಯಕ್ಕೆ ಕೆಟ್ಟದ್ದಾಗಿದೆ. ಅದು ಮೂತ್ರಪಿಂಡಗಳು ಮತ್ತು ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದು ಚರ್ಮಕ್ಕೂ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಅರಿವಿಲ್ಲದಿರಬಹದು. ಅದು ಹಾರ್ಮೋನ್ ಸಮತೋಲನವನ್ನು ವ್ಯತ್ಯಯಗೊಳಿಸುತ್ತದೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಮತ್ತು ಇದರ ಪರಿಣಾಮ ಮದ್ಯಪಾನಿಗಳ ಮುಖ ಹಾಗೂ ಚರ್ಮದಲ್ಲಿ ಕಂಡುಬರುತ್ತದೆ.

ಪ್ಯಾಕ್ ಮಾಡಲಾದ ಪಾನೀಯಗಳು
ಪ್ಯಾಕ್ ಮಾಡಲಾದ ಪಾನೀಯಗಳು ಅಥವಾ ಜ್ಯೂಸ್‌ಗಳು ಚರ್ಮಕ್ಕೆ ಹಾನಿಕಾರಕವಾಗಿವೆ. ಕೃತಕ ಪ್ಯಾಕ್ಡ್ ಜ್ಯೂಸ್‌ಗಳು ಅತಿಯಾದ ಪ್ರಮಾಣದಲ್ಲಿ ಸಕ್ಕರೆಯನ್ನು ಒಳಗೊಂಡಿದ್ದು,ಕೆಲವೇ ಪೋಷಕಾಂಶಗಳನ್ನು ಹೊಂದಿರುವುದರಿಂದ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತವೆ. ಜ್ಯೂಸ್ ಸೇವಿಸಬೇಕೆಂದಿದ್ದರೆ ಹೆಚ್ಚುವರಿ ಸಕ್ಕರೆ ಬೆರೆಸಿರದ ತಾಜಾ ಜ್ಯೂಸ್‌ನ್ನೇ ಸೇವಿಸಿರಿ. ತಾಜಾ ಜ್ಯೂಸ್‌ನಲ್ಲಿ ನೈಸರ್ಗಿಕ ಸಕ್ಕರೆಯು ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಇದು ಪ್ಯಾಕ್ಡ್ ಜ್ಯೂಸ್‌ಗಳಿಗೆ ಹೋಲಿಸಿದರೆ ಹಾನಿಕಾರಕವಲ್ಲ

Comments are closed.